ಮುಂಬೈ: ಭಾರತದ ಆರಂಭಿಕ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್, ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಮುಂಬೈ ತಂಡವನ್ನು ತೊರೆದು ಗೋವಾ ತಂಡ ಸೇರಲು ನಿರ್ಧರಿಸಿದ್ದಾರೆ.
ಜೈಸ್ವಾಲ್ ಮಂಗಳವಾರ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಬಿಟ್ಟು ಗೋವಾಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಆಡಳಿತ ಮಂಡಳಿ ಅವರ ವಿನಂತಿಯನ್ನು ಸ್ವೀಕರಿಸಿದೆ.
ಹೀಗಾಗಿ, 23 ವರ್ಷದ ಎಡಗೈ ಆಟಗಾರ ಜೈಸ್ವಾಲ್ 2025-26ರ ಋತುವಿನಿಂದ ಗೋವಾ ಪರ ಆಡಲಿದ್ದಾರೆ.
‘ಹೌದು, ಇದು ಆಶ್ಚರ್ಯಕರವಾಗಿದೆ. ಅಂತಹ ನಿರ್ಧಾರ ಕೈಗೊಳ್ಳಲು ಅವರಿಗೆ ಏನೋ ದೊಡ್ಡ ಕಾರಣ ಇರಬಹುದು. ಮುಂಬೈನಿಂದ ಬಿಡುಗಡೆ ಮಾಡಲು ಅವರು ನಮ್ಮನ್ನು ವಿನಂತಿಸಿದ್ದಾರೆ. ನಾವು ಅವರ ವಿನಂತಿಯನ್ನು ಸ್ವೀಕರಿಸಿದ್ದೇವೆ’ಎಂದು ಎಂಸಿಎ ಅಧಿಕಾರಿಯೊಬ್ಬರು ಬುಧವಾರ ಪಿಟಿಐಗೆ ತಿಳಿಸಿದ್ದಾರೆ.
ಭಾರತದ ಎಲ್ಲ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ತಂಡದಲ್ಲಿಲ್ಲದಿದ್ದಾಗ ದೇಶೀಯ ಕ್ರಿಕೆಟ್ ಆಡಬೇಕು ಎಂಬ ಬಿಸಿಸಿಐ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ನಂತರ ಜೈಸ್ವಾಲ್ ಕೊನೆಯದಾಗಿ ಜನವರಿ 23-25ರ ಅವಧಿಯಲ್ಲಿ ನಡೆದ ರಣಜಿ ಟ್ರೋಫಿ ಗ್ರೂಪ್ ಎ ಲೀಗ್ ಸುತ್ತಿನ ಪಂದ್ಯದಲ್ಲಿ ಮುಂಬೈ ಪರ ಆಡಿದ್ದರು.
ಆ ಪಂದ್ಯದಲ್ಲಿ ಜೈಸ್ವಾಲ್ 4 ಮತ್ತು 26 ರನ್ ಗಳಿಸಿದ್ದರು. ಮುಂಬೈ ತಂಡವು ಜಮ್ಮು ಮತ್ತು ಕಾಶ್ಮೀರ ವಿರುದ್ಧ ಐದು ವಿಕೆಟ್‌ಗಳಿಂದ ಪಂದ್ಯ ಸೋತಿತ್ತು.
‘ಅವರು(ಜೈಸ್ವಾಲ್) ನಮಗಾಗಿ ಆಡಲು ಬಯಸುತ್ತಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಮುಂದಿನ ಋತುವಿನಿಂದ ಅವರು ನಮಗಾಗಿ ಆಡಲಿದ್ದಾರೆ’ಎಂದು ಗೋವಾ ಕ್ರಿಕೆಟ್ ಅಸೋಸಿಯೇಷನ್‌ನ ಕಾರ್ಯದರ್ಶಿ ಶಂಬಾ ದೇಸಾಯಿ ಪಿಟಿಐಗೆ ತಿಳಿಸಿದ್ದಾರೆ.
ಜೈಸ್ವಾಲ್ ರಾಷ್ಟ್ರೀಯ ಕರ್ತವ್ಯದಲ್ಲಿಲ್ಲದಿದ್ದಾಗ ಗೋವಾ ತಂಡವನ್ನು ಮುನ್ನಡೆಸಬಹುದು ಎಂದೂ ಶಂಬಾ ದೇಸಾಯಿ ಹೇಳಿದ್ದಾರೆ.
ಜೈಸ್ವಾಲ್ ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ. ಆದ್ದರಿಂದ ಅವರು ನಾಯಕರಾಗಬಹುದು. ಅವರನ್ನು ನೇಮಕ ಮಾಡುವ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತೇವೆ. ಅವರ ಲಭ್ಯತೆಯ ಬಗ್ಗೆ ಇನ್ನೂ ಮಾತನಾಡಿಲ್ಲ ಎಂದು ದೇಸಾಯಿ ಹೇಳಿದ್ದಾರೆ.
ಜೈಸ್ವಾಲ್ ಅವರು ಮುಂಬೈನಿಂದ ಗೋವಾಕ್ಕೆ ನಿಷ್ಠೆ ಬದಲಿಸಿದ ಮೂರನೇ ಕ್ರಿಕೆಟರ್ ಆಗಿದ್ದಾರೆ. ಈ ಹಿಂದೆ ಅರ್ಜುನ್ ತೆಂಡೂಲ್ಕರ್ ಮತ್ತು ಸಿದ್ದೇಶ್ ಲಾಡ್ ಅವರು 2022–23 ರಿಂದ ಗೋವಾ ಪರ ಆಡಿದ್ದರು. ಇವರಲ್ಲಿ ಲಾಡ್ ಅವರು ಎಂಸಿಎ ನಿಯಮದಂತೆ ‘ಕೂಲಿಂಗ್ ಆಫ್’ ಅವಧಿ ಪೂರೈಸಿ ಮತ್ತೆ ಮುಂಬೈ ತಂಡಕ್ಕೆ ಮರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.