ನವದೆಹಲಿ: ನನ್ನ ಮಗನ ಸಹ ಆಟಗಾರರೆಲ್ಲ ಬೆನ್ನಿಗೆ ಇರಿಯುವವವರೇ ಆಗಿದ್ದರು ಎಂದು ಖ್ಯಾತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ದೂರಿದ್ದಾರೆ.
ವಿರಾಟ್ ಕೊಹ್ಲಿ, ಧೋನಿ ಸೇರಿ ಎಲ್ಲರೂ ಬೆನ್ನಿಗೆ ಇರಿದವರೇ. ಸಚಿನ್ ಒಬ್ಬರೇ ಯುವಿಯ ನಿಜವಾದ ಸ್ನೇಹಿತರಾಗಿದ್ದರು ಎಂದು ಎನ್‌ಡಿಟಿಯ ಇನ್‌ಸೈಡ್ ಸ್ಫೋರ್ಟ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಯುವಿಗೆ ವೃತ್ತಿಜೀವನದ ಅಂತ್ಯದಲ್ಲಿ ಆಗಿನ ನಾಯಕ ವಿರಾಟ್ ಕೊಹ್ಲಿ ಸಹಾಯ ಮಾಡಬಹುದಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಯೋಗರಾಜ್, ನನ್ನ ಮಗ ಎಲ್ಲಿ ಅವರ ಸ್ಥಾನ ಕಸಿದುಕೊಳ್ಳುತ್ತಾನೊ ಎಂದು ಎಲ್ಲರೂ ಭಯಭೀತರಾಗುತ್ತಿದ್ದರು ಎಂದಿದ್ದಾರೆ.
'ಯಶಸ್ಸು, ಹಣ ಮತ್ತು ವೈಭವದ ಕ್ಷೇತ್ರದಲ್ಲಿ ಸ್ನೇಹಿತರಿರುವುದಿಲ್ಲ. ಬೆನ್ನಿಗೆ ಚೂರಿ ಹಾಕುವವರೇ ಇರುತ್ತಾರೆ. ನಿಮ್ಮನ್ನು ಕುಗ್ಗಿಸುವ ಜನರು ಇರುತ್ತಾರೆ. ಯುವರಾಜ್ ಸಿಂಗ್ ಅವರನ್ನು ಕಂಡರೆ ಸಹ ಆಟಗಾರರು ಹೆದರುತ್ತಿದ್ದರು. ಅವರು ತಮ್ಮ ಸ್ಥಾನಕ್ಕೆ ಎಲ್ಲಿ ಕುತ್ತು ಬರುತ್ತದೆಯೋ ಎಂದು ಯೋಚಿಸುತ್ತಿದ್ದರು. ಏಕೆಂದರೆ, ಯುವಿ ದೇವರು ಸೃಷ್ಟಿಸಿದ ಮಹಾನ್ ಪ್ರತಿಭೆ: ಎಂದಿದ್ದಾರೆ.
ಯುವರಾಜ್ ಅವರ ಮಾಜಿ ಸಹ ಆಟಗಾರರ ವಿರುದ್ಧ ಯೋಗರಾಜ್ ಗಂಭೀರ ಆರೋಪಗಳನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ತಮ್ಮ ಮಗನನ್ನು ಒತ್ತಾಯಪೂರ್ವಕವಾಗಿ ನಿವೃತ್ತರಾಗುವಂತೆ ಮಾಡಲಾಯಿತು ಎಂದು ಅವರು ಪದೇ ಪದೇ ಪುನರುಚ್ಚರಿಸಿದ್ದಾರೆ.
2000-2017ರ ಅವಧಿಯಲ್ಲಿ ಯುವರಾಜ್ 402 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 35.05ರ ಸರಾಸರಿಯಲ್ಲಿ 11,178 ರನ್ ಸಿಡಿಸಿದ್ದಾರೆ. 17 ಶತಕ ಮತ್ತು 71 ಅರ್ಧಶತಕ ಗಳಿಸಿದ್ದಾರೆ.
2007ರ ಟಿ–20 ವಿಶ್ವಕಪ್‌ನ ಪಂದ್ಯವೊಂದರಲ್ಲಿ ಓವರಿನ ಆರೂ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ್ದರು. ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಯುವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.