ADVERTISEMENT

ಕೊರೊನಾ ವೈರಸ್‌ಗಿಂತ ಕಡೆ: ಸರವಣ್ ವಿರುದ್ಧ ಕ್ರಿಸ್‌ ಗೇಲ್‌ ಕೆಂಡ

ಜಮೈಕಾ ತಲವಾಸ್‌ ತಂಡದಿಂದ ಹೊರದಬ್ಬಲು ಸಂಚು: ಆರೋಪ

ಪಿಟಿಐ
Published 28 ಏಪ್ರಿಲ್ 2020, 19:45 IST
Last Updated 28 ಏಪ್ರಿಲ್ 2020, 19:45 IST
ಕ್ರಿಸ್‌ ಗೇಲ್
ಕ್ರಿಸ್‌ ಗೇಲ್   

ಜಮೈಕಾ: ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ತಂಡ ಜಮೈಕಾ ತಲವಾಸ್‌ನಿಂದ ತಾವು ಹೊರಬೀಳಲು ಸಹ ಆಟಗಾರ ರಾಮನರೇಶ್‌ ಸರವಣ್‌ ಹೂಡಿದ ಸಂಚು ಕಾರಣ ಎಂದು ವೆಸ್ಟ್‌ ಇಂಡೀಸ್‌ ಆರಂಭ ಆಟಗಾರ ಕ್ರಿಸ್‌ ಗೇಲ್‌ ಆರೋಪಿಸಿದ್ದಾರೆ. ‘ಸರವಣ್‌ ಅವರು ಕೊರೊನಾ ವೈರಸ್‌ಗಿಂತ ಕಡೆ’ ಎಂದು ಕಿಡಿಕಾರಿದ್ದಾರೆ.

ಜಮೈಕಾ ತಂಡದಿಂದ ನಿರ್ಗಮನದ ನಂತರ ‘ಬಿಗ್‌ ಹಿಟ್ಟರ್‌‘ ಗೇಲ್‌ ಅವರು ಸೇಂಟ್‌ ಲೂಸಿಯಾ ಜೂಕ್ಸ್‌ ತಂಡಕ್ಕೆ ಆಡುತ್ತಿದ್ದಾರೆ. ಜಮೈಕಾ ತಂಡ 2020ರ ಋತುವಿಗೆ ಗೇಲ್‌ ಅವರನ್ನು ಉಳಿಸಿಕೊಂಡಿರಲಿಲ್ಲ.

‘ನನ್ನನ್ನು ಹೊರಹಾಕಿರುವುದರ ಹಿಂದೆ ಸರವಣ್‌ ಕೈವಾಡವಿದೆ. ಫ್ರಾಂಚೈಸ್‌ನ ನಿಯಂತ್ರಣ ಹೊಂದಲು ಸರವಣ್‌ ಯತ್ನಿಸುತ್ತಿದ್ದರು‘ ಎಂದಿದ್ದಾರೆ ಗೇಲ್‌. ರಾಷ್ಟ್ರೀಯ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದ ಸರವಣ್‌ ಹಾಲಿ ಜಮೈಕಾ ತಲವಾಸ್‌ ತಂಡಕ್ಕೆ ಅಸಿಸ್ಟೆಂಟ್‌ ಕೋಚ್‌ ಆಗಿದ್ದಾರೆ.

ADVERTISEMENT

‘ಸರವಣ್‌ ಈಗ ನೀವು ಕೊರೊನಾ ವೈರಸ್‌ಗಿಂತ ಕೆಟ್ಟವರಾಗಿದ್ದೀರಿ’ ಎಂದು ಗೇಲ್‌ ಹೇಳಿದ್ದು, ಆ ವಿಡಿಯೊವನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.

‘ಸರವಣ್ ನೀವು ಹಾವಿದ್ದಂತೆ. ಸೇಡಿಗೆ ಕಾಯುತ್ತೀರಿ. ದ್ವೇಷ ಸಾಧಿಸುತ್ತಿದ್ದೀರಿ. ನೀವೊಬ್ಬ ಅಪ್ರಬುದ್ಧ ವ್ಯಕ್ತಿ. ಈಗಲೂ ಬೆನ್ನ ಹಿಂದೆ ಚೂರಿಹಾಕುವ ಸ್ವಭಾವದವರು‘ ಎಂದು ಸರವಣ್‌ ವಿರುದ್ಧ ಕೆಂಡಕಾರಿದ್ದಾರೆ.

ಗೇಲ್‌ ನಾಲ್ಕು ವರ್ಷ ಜಮೈಕಾ ತಂಡಕ್ಕೆ ಆಡಿದ್ದರು. ನಂತರ ಸೇಂಟ್‌ ಕಿಟ್ಸ್‌ ಆ್ಯಂಡ್‌ ನೆವಿಸ್‌ ‍ಪೇಟ್ರಿಯಟ್ಸ್‌ ತಂಡಕ್ಕೆ ಎರಡು ವರ್ಷ ಆಡಿ, ಜಮೈಕಾ ತಂಡಕ್ಕೆ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.