ADVERTISEMENT

ಮತ್ತೊಬ್ಬ ಸಚಿನ್‌, ಸನ್ನಿ ಬರಲಾರರು: ಮಿಯಾಂದಾದ್

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 9:22 IST
Last Updated 9 ಜೂನ್ 2020, 9:22 IST
ಜಾವೇದ್‌ ಮಿಯಾಂದಾದ್
ಜಾವೇದ್‌ ಮಿಯಾಂದಾದ್   

ಕ್ರಿಕೆಟ್‌ ಲೋಕಕ್ಕೆ ಮತ್ತೊಬ್ಬ ಲಿಟಲ್‌ ಮಾಸ್ಟರ್‌ ಸುನಿಲ್‌ ಗವಾಸ್ಕರ್‌ ಮತ್ತು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್ ಅವರಂತ ಶ್ರೇಷ್ಠ ಆಟಗಾರರು ಬರಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಕಪ್ತಾನ ಜಾವೇದ್‌ ಮಿಯಾಂದಾದ್‌ ಹೊಗಳಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೋಹ್ಲಿ ಅವರನ್ನು ಸಚಿನ್‌ ಮತ್ತು ಗವಾಸ್ಕರ್‌ ಅವರಿಗೆ ಹೋಲಿಸಲು ನಿರಾಕರಿಸಿದ ಅವರು,ಬೇರೆ, ಬೇರೆ ಕಾಲಮಾನದ ಆಟಗಾರರ ಪರಸ್ಪರ ಹೋಲಿಕೆ ಮಾಡಲಾಗದು ಎಂದು ಹೇಳಿದ್ದಾರೆ.

ಇಂದಿನ ಕಾಲದ ಕ್ರಿಕೆಟಿಗರನ್ನು ತಮ್ಮ ಜಮಾನಾದ ಕ್ರಿಕೆಟ್‌ ಆಟಗಾರರೊಂದಿಗೆ ಹೋಲಿಕೆ ಮಾಡುವುದು ಸಾಧ್ಯವಿಲ್ಲ. ಈಗಿನಂತೆ 70 ಮತ್ತು 80ರ ದಶಕದಲ್ಲಿ ರನ್‌ ಗಳಿಸುವುದು ಸುಲಭದ ಕೆಲಸವಾಗಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ADVERTISEMENT

‘ನಮ್ಮ ಕಾಲದ ಕ್ರಿಕೆಟ್‌ ಈಗಿನಷ್ಟು ಸುಲಭವಾಗಿರಲಿಲ್ಲ. ವೆಸ್ಟ್ ಇಂಡೀಸ್‌ನ ದೈತ್ಯ ವೇಗಿಗಳಾದ ಮಾಲ್ಕಂ ಮಾರ್ಷಲ್‌, ಮೈಕೆಲ್‌ ಹೋಲ್ಡಿಂಗ್‌, ಡೆನ್ನಿಸ್‌ ಲಿಲ್ಲಿ, ಜೆಫ್‌ ಥಾಮ್ಸನ್‌, ರಿಚರ್ಡ್‌ ಹ್ಯಾಡ್ಲಿ ಬಿರುಗಾಳಿ ವೇಗದಲ್ಲಿ ಎಸೆಯುತ್ತಿದ್ದ ಚೆಂಡುಗಳು ಬೆಂಕಿ ಉಂಡೆಗಳಂತೆ ನಮ್ಮತ್ತ ತೂರಿ ಬರುತ್ತಿದ್ದವು. ಅವನ್ನು ಎದುರಿಸುವುದು ಸುಲಭದ ಮಾತಾಗಿರಲಿಲ್ಲ. ಸ್ವಲ್ಪ ಯಾಮಾರಿದರೂ ಗ್ಯಾಲರಿ ಬದಲು ಆಸ್ಪತ್ರೆ ಸೇರಬೇಕಿತ್ತು. ಈ ವೇಗಿಗಳನ್ನು ಎದುರಿಸಲು ವಿಭಿನ್ನ ತಂತ್ರಗಾರಿಕೆ ಅಗತ್ಯವಿತ್ತು’ ಎಂದು ಮಿಯಾಂದಾದ ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.

ವಿರಾಟ್‌ ಕೊಹ್ಲಿ, ಸ್ಟೀವ್‌ ಸ್ಮಿತ್‌, ವಿಲ್ಲಿಯಂಸನ್ಸ್‌, ಜೋ ರೂಟ್‌, ಬಾಬರ್‌ ಅಜಂ ಕೂಡಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಎಂಬುವುದರಲ್ಲಿ ಎರಡು ಮಾತಿಲ್ಲ. ಇವರು ಆಡುತ್ತಿರುವ ಪಿಚ್‌, ಸ್ಥಿತಿಗತಿ, ಪರಿಸರ ವಿಭಿನ್ನ. ಹಾಗಾಗಿ ಹಳೆಯ ಕಾಲದ ಆಟಗಾರರೊಂದಿಗೆ ಸಾಮ್ಯತೆ ಸರಿಯಲ್ಲ ಎಂದು ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿದ್ದ ಮಿಯಾಂದಾದ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.