ADVERTISEMENT

ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿ: ಆಸ್ಟ್ರೇಲಿಯಾ, ಚೀನಾ ಜಯಭೇರಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 20:27 IST
Last Updated 11 ಜನವರಿ 2019, 20:27 IST
ಚೀನಾ ತಂಡದ ವು ಲೀ (ಕೆಂಪು ಪೋಷಾಕು) ಗೋಲು ಗಳಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ
ಚೀನಾ ತಂಡದ ವು ಲೀ (ಕೆಂಪು ಪೋಷಾಕು) ಗೋಲು ಗಳಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ   

ಅಬುಧಾಬಿ: ಮಿಂಚಿನ ಆಟ ಆಡಿದ ಆಸ್ಟ್ರೇಲಿಯಾ ಮತ್ತು ಚೀನಾ ತಂಡದವರು ಎಎಫ್‌ಸಿ ಏಷ್ಯಾಕಪ್‌ ಟೂರ್ನಿಯ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದ್ದಾರೆ.

ಮಕ್ತೌಮ್‌ ಬಿನ್‌ ರಶೀದ್‌ ಅಲ್‌ ಮಕ್ತೌಮ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಬಿ’ ಗುಂಪಿನ ಪೈಪೋಟಿಯಲ್ಲಿ ಆಸ್ಟ್ರೇಲಿಯಾ 3–0 ಗೋಲುಗಳಿಂದ ಪ್ಯಾಲೆಸ್ತೀನ್‌ ತಂಡವನ್ನು ಸೋಲಿಸಿತು.

ಈ ಜಯದೊಂದಿಗೆ ಕಾಂಗರೂಗಳ ನಾಡಿನ ತಂಡ ಗುಂ‍ಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ADVERTISEMENT

4–2–3–1 ಯೋಜನೆಯೊಂದಿಗೆ ಮೈದಾನಕ್ಕಿಳಿದಿದ್ದ ಆಸ್ಟ್ರೇಲಿಯಾ ತಂಡ ಆರಂಭದಿಂದಲೇ ಚುರುಕಿನ ಆಟಕ್ಕೆ ಅಣಿಯಾಯಿತು. ಎದುರಾಳಿ ರಕ್ಷಣಾ ಕೋಟೆಯ ಮೇಲೆ ನಿರಂತರವಾಗಿ ದಾಳಿ ನಡೆಸುವ ಈ ತಂಡದ ತಂತ್ರಕ್ಕೆ 18ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಜೆಮಿ ಮೆಕ್‌ಲಾರೆನ್‌ ಚೆಂಡನ್ನು ಗುರಿ ತಲುಪಿಸಿದರು.

ಇದರ ಬೆನ್ನಲ್ಲೇ ಅವೆರ್‌ ಮಬಿಲ್‌ ಮೋಡಿ ಮಾಡಿದರು. 20ನೇ ನಿಮಿಷದಲ್ಲಿ ಕಾಲ್ಚಳಕ ತೋರಿದ ಅವರು ತಂಡದ ಖುಷಿ ಹೆಚ್ಚಿಸಿದರು.

ನಂತರ ಎರಡು ತಂಡಗಳೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. 85 ನಿಮಿಷಗಳವರೆಗೂ ಆಸ್ಟ್ರೇಲಿಯಾ ಮುನ್ನಡೆಯಲ್ಲಿತ್ತು. 90ನೇ ನಿಮಿಷದಲ್ಲಿ ಈ ತಂಡದ ಅಪೊಸ್‌ಟೊಲೊಸ್‌ ಜಿಯಾನೊವ್‌ ಗೋಲು ಗಳಿಸಿ ಸಂಭ್ರಮಿಸಿದರು.

‘ಸಿ’ ಗುಂಪಿನ ಪಂದ್ಯದಲ್ಲಿ ಚೀನಾ ತಂಡ 3–0 ಗೋಲುಗಳಿಂದ ಫಿಲಿಪ್ಪೀನ್ಸ್‌ ಎದುರು ಗೆದ್ದಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು ಆರಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.

ಮೊಹಮ್ಮದ್‌ ಬಿನ್‌ ಜಾಯೆದ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಚೀನಾ ತಂಡದ ವು ಲೀ ಮಿಂಚಿದರು. ಅವರು 40 ಮತ್ತು 66ನೇ ನಿಮಿಷಗಳಲ್ಲಿ ಗೋಲು ಹೊಡೆದರು. 80ನೇ ನಿಮಿಷದಲ್ಲಿ ಯು ಡಬಾವೊ ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.