ಚಿಯಾಂಗ್ ಮೈ (ಥಾಯ್ಲೆಂಡ್): ಮುಂದಿನ ವರ್ಷದ ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ನಿರ್ಣಾಯಕವಾಗಿರುವ ಪಂದ್ಯದಲ್ಲಿ ಭಾರತ ತಂಡವು ಶನಿವಾರ ತನಗಿಂತ ಮೇಲಿನ ಕ್ರಮಾಂಕದ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ.
ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಕ್ವಾಲಿಫೈಯರ್‌ನಲ್ಲಿ ಇದುವರೆಗಿನ ಮೂರು ಪಂದ್ಯಗಳನ್ನು ಲೀಲಾಜಾಲವಾಗಿ ಗೆದ್ದಿರುವ ಭಾರತಕ್ಕೆ ಆತಿಥೇಯರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ. ತಂಡವೂ ಶತಪ್ರಯತ್ನ ಹಾಕಬೇಕಿದೆ.
ಭಾರತ ತಂಡವು, ಹಿಂದೆಂದೂ ಥಾಯ್ಲೆಂಡ್ ತಂಡವನ್ನು ಸೋಲಿಸಿಲ್ಲ. ಕ್ವಾಲಿಫೈಯರ್ ಮೂಲಕ ಏಷ್ಯಾ ಖಂಡದ ಅತಿ ದೊಡ್ಡ ಟೂರ್ನಿಯಾದ ಎಎಫ್‌ಸಿ ಮಹಿಳಾ ಕಪ್‌ಗೆ ತೇರ್ಗಡೆ ಸಹ ಪಡೆದಿಲ್ಲ. ಭಾರತ 2003ರಲ್ಲಿ ಕೊನೆಯ ಬಾರಿ ಆಡಿತ್ತು. ಆದರೆ ಆಗ ಅರ್ಹತಾ ಸುತ್ತು ಇರಲಿಲ್ಲ. 2022ರ ಟೂರ್ನಿಯಲ್ಲಿ ಭಾರತ ಆತಿಥೇಯವಾಗಿದ್ದರೂ ಆಡಿರಲಿಲ್ಲ. ಆಗ ತಂಡದ ಆಟಗಾರ್ತಿಯರಿಗೆ ಕೊರೊನಾ ಸೋಂಕು ಕಾಡಿತ್ತು.
ಆದರೆ ಲೀಗ್‌ನಲ್ಲಿ ಅಜೇಯವಾಗಿರುವ ತಂಡದ ಎದುರು ಈಗ ಉತ್ತಮ ಅವಕಾಶವಿದೆ.
‘ಅರ್ಹತೆ ಪಡೆದಲ್ಲಿ ಅದು ಭಾರತ ಮಹಿಳಾ ತಂಡದ ಪಾಲಿಗೆ ಒಳ್ಳೆಯ ಬೆಳವಣಿಗೆಯಾಗಲಿದೆ. ಜೊತೆಗೆ ದೇಶದ ಫುಟ್‌ಬಾಲ್ ಪ್ರಗತಿಗೂ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ’ ಎಂದು ಕೋಚ್ ಕ್ರಿಸ್ಪಿನ್ ಚೆಟ್ರಿ ತಿಳಿಸಿದರು.
ಜಪಾನ್‌ನ ಫುತೋಶಿ ಇಕೆಡಾ ಅವರ ಗರಡಿಯಲ್ಲಿ ಪಳಗಿರುವ ಥಾಯ್ಲೆಂಡ್ ತಂಡವು ಸತತ ಹತ್ತನೇ ಬಾರಿ ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ಗೆ ಅರ್ಹತೆ ಪಡೆಯುವ ಗುರಿಹೊಂದಿದೆ. ಈ ತಂಡವು ಎರಡು ಬಾರಿ ಫಿಫಾ ಮಹಿಳಾ ವಿಶ್ವಕಪ್‌ನಲ್ಲೂ ಆಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.