ನವದೆಹಲಿ: ಸೆಪ್ಟೆಂಬರ್ ಎರಡನೇ ಅಥವಾ ಮೂರನೇ ವಾರದಿಂದ ಸೂಪರ್ ಕಪ್ ಫುಟ್‌ಬಾಲ್ ಟೂರ್ನಿ ನಡೆಸಲು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಉದ್ದೇಶಿಸಿದೆ. ಆದರೆ ಈ ಋತುವಿನಲ್ಲಿ ಐಎಸ್‌ಎಲ್ ಟೂರ್ನಿ ನಡೆಯುವುದು ಇನ್ನೂ ಖಚಿತವಾಗಿಲ್ಲ.
ಇಂಡಿಯನ್ ಸೂಪರ್ ಲೀಗ್ ಕ್ಲಬ್ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಎಐಎಫ್ಎಫ್ ಸೂಪರ್ ಕಪ್ ನಡೆಸುವ ಪ್ರಸ್ತಾವ ಮುಂದಿಟ್ಟಿತು. ಎಐಎಫ್‌ಎಫ್ ಮತ್ತು ಲೀಗ್ ಆಯೋಜಕ ಎಫ್‌ಎಸ್‌ಡಿಎಲ್ ನಡುವೆ ಮಾಸ್ಟರ್ ರೈಟ್ಸ್ ಒಪ್ಪಂದ ನವೀಕರಣಕ್ಕೆ ಸಂಬಂಧಿಸಿದ ಗೊಂದಲ ಬಗೆಹರಿದಿಲ್ಲದ ಕಾರಣ ಐಎಸ್‌ಎಲ್ ಅನಿಶ್ಚಿತವಾಗಿದೆ.
‘ಐಎಸ್‌ಎಲ್ ಕ್ಲಬ್ ಆಟಗಾರರಿಗೆ ಸ್ಪರ್ಧೆಗಳು ತಪ್ಪಿಹೋಗದಂತೆ ಮುಂದಿನ ತಿಂಗಳ ಎರಡನೇ ಅಥವಾ ಮೂರನೇ ವಾರದಿಂದ ಸೂಪರ್ ಕಪ್ ನಡೆಸಲು ಉದ್ದೇಶಿಸಲಾಗಿದೆ. ನಂತರ ಐಎಸ್‌ಎಲ್ ನಡೆಸಲು ಅವಕಾಶವಿದೆ’ ಎಂದು ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಷ್ಟ್ರದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಎಐಎಫ್‌ಎಫ್ ಮತ್ತು 13 ಐಎಸ್‌ಎಲ್ ಕ್ಲಬ್‌ಗಳು ಸಾಮೂಹಿಕವಾಗಿ ಈ ನಿರ್ಧಾರಕ್ಕೆ ಬಂದಿವೆ. ನಾವೆಲ್ಲ 7 ರಿಂದ 10 ದಿನಗಳ ಒಳಗೆ ಮತ್ತೊಮ್ಮೆ ಸಭೆ ಸೇರಲಿದ್ದು, ಸೂಪರ್ ಕಪ್ ಆರಂಭಿಸುವ ದಿನಾಂಕ ನಿಗದಿಪಡಿಸಲಿದ್ದೇವೆ’ ಎಂದು ಚೌಬೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.