ADVERTISEMENT

ಅರ್ಜೆಂಟೀನಾ ಚಾಂಪಿಯನ್‌, ಕೊನೆಗೂ ನನಸಾದ ಮೆಸ್ಸಿ ಕನಸು: ಫ್ರಾನ್ಸ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 20:17 IST
Last Updated 18 ಡಿಸೆಂಬರ್ 2022, 20:17 IST
ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಅರ್ಜೆಂಟೀನಾ ಆಟಗಾರರ ಸಂಭ್ರಮ –ಎಎಫ್‌ಪಿ ಚಿತ್ರ
ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಅರ್ಜೆಂಟೀನಾ ಆಟಗಾರರ ಸಂಭ್ರಮ –ಎಎಫ್‌ಪಿ ಚಿತ್ರ   

ದೋಹಾ: ಆಧುನಿಕ ಫುಟ್‌ಬಾಲ್‌ನ ದಿಗ್ಗಜ ಆಟಗಾರ ಲಯೊನೆಲ್‌ ಮೆಸ್ಸಿ ಅವರ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ, ಕತಾರ್‌ನ ರಾಜಧಾನಿ ದೋಹಾದ ಲುಸೈಲ್‌ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಈಡೇರಿತು.

ಫ್ರಾನ್ಸ್‌ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4–2 ಗೋಲುಗಳಿಂದ ಮಣಿಸಿದ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯನ್ನು ಗೆದ್ದು ಬೀಗಿತು.

ಮೆಸ್ಸಿ ಅವರು ಈ ಹಿಂದಿನ ನಾಲ್ಕು ವಿಶ್ವಕಪ್‌ ಟೂರ್ನಿಗಳಲ್ಲಿ ತನಗೆ ದಕ್ಕದೇ ಇದ್ದ ಮಿರುಗುವ ಟ್ರೋಫಿಯನ್ನು ಐದನೇ ಪ್ರಯತ್ನದಲ್ಲಿ ಎತ್ತಿಹಿಡಿದು ಮುತ್ತಿಕ್ಕಿದರು. ಆ ಕ್ಷಣಕ್ಕಾಗಿ ಕಾಯುತ್ತಿದ್ದ ಅವರ ಅಭಿಮಾನಿಗಳು ಆನಂದಭಾಷ್ಪ ಸುರಿಸಿದರು. ದಕ್ಷಿಣ ಅಮೆರಿಕದ ರಾಷ್ಟ್ರ, ಅರ್ಜೆಂಟೀನಾ ಸಂಭ್ರಮದಲ್ಲಿ ಮಿಂದೆದ್ದಿತು. ಸಾವಿರಾರು ಮಂದಿ ಬೀದಿಗಿಳಿದು ಸಂತಸಪಟ್ಟರು.

ADVERTISEMENT

ನಿಗದಿತ ಮತ್ತು ಹೆಚ್ಚುವರಿ ಅವಧಿಯ ಬಳಿಕ ಉಭಯ ತಂಡಗಳು 3–3 ಗೋಲುಗಳಿಂದ ಸಮಬಲ ಸಾಧಿಸಿ
ದ್ದವು. ಇದರಿಂದ ವಿಜೇತರನ್ನು ನಿರ್ಣಯಿ
ಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ನಿಗದಿತ ಸಮಯದಲ್ಲಿ ಅರ್ಜೆಂಟೀನಾ ಪರ ಮೆಸ್ಸಿ (23 ಮತ್ತು 109ನೇ ನಿ.) ಎರಡು ಗೋಲುಗಳನ್ನು ಗಳಿಸಿದರೆ, ಇನ್ನೊಂದು ಗೋಲನ್ನು ಏಂಜೆಲ್‌ ಡಿ ಮರಿಯಾ (36ನೇ ನಿ.) ತಂದಿತ್ತರು. ಫ್ರಾನ್ಸ್‌ ತಂಡದ ಮೂರೂ ಗೋಲುಗಳನ್ನು ಕಿಲಿಯಾನ್‌ ಎಂಬಾಪೆ (80, 81 ಮತ್ತು 118ನೇ ನಿ.) ಗಳಿಸಿದರು.

ಅರ್ಜೆಂಟೀನಾಕ್ಕೆ ದೊರೆತ ಮೂರನೇ ಟ್ರೋಫಿ ಇದು. ಈ ಹಿಂದೆ 1978 ಮತ್ತು 1986 ರಲ್ಲಿ ಚಾಂಪಿಯನ್‌ ಆಗಿತ್ತು. ಡಿಯೆಗೊ ಮರಡೋನಾ ಅವರು 36 ವರ್ಷಗಳ ಹಿಂದೆ ಮೆಕ್ಸಿಕೊದಲ್ಲಿ ಮಾಡಿದ್ದ ಚಮತ್ಕಾರವನ್ನು ಮೆಸ್ಸಿ, ಮರುಭೂಮಿಯ ನಾಡಿನಲ್ಲಿ ಮಾಡಿ ತೋರಿಸಿದರು. 35 ವರ್ಷದ ಮೆಸ್ಸಿ ಅವರಿಗೆ ಇದು ಬಹುತೇಕ ಕೊನೆಯ ವಿಶ್ವಕಪ್‌ ಟೂರ್ನಿ ಆಗಿದೆ.

ಸತತ ಎರಡನೇ ಪ್ರಶಸ್ತಿ ಜಯಿಸಬೇಕೆಂಬ ಫ್ರಾನ್ಸ್‌ ತಂಡದ ಕನಸು ನುಚ್ಚುನೂರಾಯಿತು. ಸ್ಟಾರ್ ಆಟಗಾರ ಎಂಬಾಪೆ ಮಿಂಚಿದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.