ADVERTISEMENT

2023ರ ಫಿಫಾ ಮಹಿಳಾ ವಿಶ್ವಕಪ್‌: ಆಸ್ಟ್ರೇಲಿಯಾ–ನ್ಯೂಜಿಲೆಂಡ್‌ಗೆ ಆತಿಥ್ಯ

ಏಜೆನ್ಸೀಸ್
Published 26 ಜೂನ್ 2020, 12:32 IST
Last Updated 26 ಜೂನ್ 2020, 12:32 IST
ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ –ಎಎಫ್‌ಪಿ ಚಿತ್ರ 
ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ –ಎಎಫ್‌ಪಿ ಚಿತ್ರ    

ಜಿನೆವಾ: 2023ರ ಫಿಫಾ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಆಯೋಜನೆಯಾಗಲಿದೆ.

ವಿಶ್ವಕಪ್‌ ಆತಿಥ್ಯಕ್ಕಾಗಿ ಉಭಯ ರಾಷ್ಟ್ರಗಳು ಜಂಟಿಯಾಗಿ ಬಿಡ್‌ ಸಲ್ಲಿಸಿದ್ದವು.

ಗುರುವಾರ ನಡೆದ ಫಿಫಾ ಕೌನ್ಸಿಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಟೂರ್ನಿ ನಡೆಸುವ ನಿರ್ಣಯದ ಪರ 22 ಮತಗಳು ಚಲಾವಣೆಯಾದವು. ಕೊಲಂಬಿಯಾ ಕೂಡ ಬಿಡ್‌ ಸಲ್ಲಿಸಿತ್ತು. ಆ ರಾಷ್ಟ್ರದ ಪರ 13 ಮತಗಳಷ್ಟೇ ಚಲಾವಣೆಗೊಂಡವು.

ADVERTISEMENT

ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಮತ್ತು ಈ ಹಿಂದೆ ಅಮೆರಿಕ ಫುಟ್‌ಬಾಲ್‌ ಫೆಡರೇಷನ್‌ನ ಅಧ್ಯಕ್ಷರಾಗಿದ್ದ ಸುನಿಲ್‌ ಗುಲಾಟಿ ಅವರು ಕಾಂಗರೂ ಮತ್ತು ಕಿವೀಸ್‌ ನಾಡಿನಲ್ಲಿ ಟೂರ್ನಿ ನಡೆಸುವ ಬಗ್ಗೆ ಒಲವು ತೋರಿದರು.

ಮಹಿಳಾ ಫುಟ್‌ಬಾಲ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.ಒಟ್ಟು 32 ತಂಡಗಳು ಪಾಲ್ಗೊಳ್ಳಲಿರುವ ಮೊದಲ ವಿಶ್ವಕಪ್‌ ಎಂಬ ಹೆಗ್ಗಳಿಕೆ ಈ ಟೂರ್ನಿಯದ್ದಾಗಿದೆ. ಜಂಟಿಯಾಗಿ ಆಯೋಜನೆಯಾಗುತ್ತಿರುವ ಮೊದಲ ಟೂರ್ನಿಯೂ ಇದಾಗಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳು ವಿಶ್ವ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ 7 ಮತ್ತು 23ನೇ ಸ್ಥಾನಗಳಲ್ಲಿದ್ದು, ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸಲಿವೆ.

‘ಮಹಿಳಾ ಫುಟ್‌ಬಾಲ್‌ನ ಬೆಳವಣಿಗೆಗೆ ನಾವೆಲ್ಲಾ ಶ್ರಮಿಸಬೇಕಿದೆ. ಹೀಗಾಗಿ ಇನ್ನು ಮುಂದೆ ನಾಲ್ಕರ ಬದಲು ಪ್ರತಿ ಎರಡು ವರ್ಷಗಳಿಗೊಮ್ಮೆ ವಿಶ್ವಕಪ್‌ ಆಯೋಜಿಸುವಂತೆ ಹಲವರು ಸಲಹೆ ನೀಡಿದ್ದಾರೆ. ಇದನ್ನು ಪರಿಶೀಲಿಸುತ್ತೇವೆ’ ಎಂದು ಇನ್ಫಾಂಟಿನೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.