ADVERTISEMENT

ಬಿಎಫ್‌ಸಿಗೆ ನಾರ್ತ್ ಈಸ್ಟ್ ಜಯದ ‘ಉಡುಗೊರೆ’

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿ: ಅಗ್ರ ಪಟ್ಟ ಉಳಿಸಿಕೊಂಡ ಚೆಟ್ರಿ ಬಳಗ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 20:00 IST
Last Updated 30 ಜನವರಿ 2019, 20:00 IST
ಬಿಎಫ್‌ಸಿ ತಂಡದ ಆಕ್ರಮಣವನ್ನು ತಡೆದ ನಾರ್ತ್ ಈಸ್ಟ್ ಯುನೈಟೆಡ್‌ನ ಗೋಲ್‌ಕೀಪರ್‌ –ಟ್ವಿಟರ್ ಚಿತ್ರ
ಬಿಎಫ್‌ಸಿ ತಂಡದ ಆಕ್ರಮಣವನ್ನು ತಡೆದ ನಾರ್ತ್ ಈಸ್ಟ್ ಯುನೈಟೆಡ್‌ನ ಗೋಲ್‌ಕೀಪರ್‌ –ಟ್ವಿಟರ್ ಚಿತ್ರ   

ಬೆಂಗಳೂರು: ಪ್ರಬಲ ಪೈಪೋಟಿ ನೀಡಿದ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಮಣಿಸಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನವನ್ನು ಉಳಿಸಿಕೊಂಡಿತು.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ 2–1 ಗೋಲುಗಳಿಂದ ಆತಿಥೇಯ ತಂಡ ಜಯ ಗಳಿಸಿತು. ನಾರ್ತ್ ಈಸ್ಟ್ ಯುನೈಟೆಡ್‌ ತಂಡದ ಮಿಸ್ಲಾವ್ ಕೊಮೊರ್‌ಸ್ಕಿ ನೀಡಿದ ಉಡುಗೊರೆ ಗೋಲು ಮತ್ತು ಚೆಂಚೊ ಗೆಲ್ಶೆನ್ ಗಳಿಸಿದ ಗೋಲುಗಳು ಬಿಎಫ್‌ಸಿಗೆ ಗೆಲುವು ತಂದುಕೊಟ್ಟವು.

4–2–3–1 ತಂತ್ರದೊಂದಿಗೆ ಕಣಕ್ಕೆ ಇಳಿದ ಬಿಎಫ್‌ಸಿಗೆ ಆರಂಭದಿಂದಲೇ ನಾರ್ತ್ ಈಸ್ಟ್‌ ತಂಡದವರು ಭಾರಿ ಪೈಪೋಟಿ ನೀಡಿದರು. ಹೀಗಾಗಿ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಆದರೆ 14ನೇ ನಿಮಿಷದಲ್ಲಿ ನಾರ್ತ್ ಈಸ್ಟ್‌ ತಂಡ ನಿರಾಸೆಗೆ ಒಳಗಾಯಿತು. ತಮ್ಮದೇ ಗೋಲು ಪೆಟ್ಟಿಗೆ ಬಳಿ ಬಿಎಫ್‌ಸಿಯ ಆಕ್ರಮಣವನ್ನು ತಡೆಯುವ ಪ್ರಯತ್ನದಲ್ಲಿ ಮಿಸ್ಲಾವ್ ಎಡವಿದರು. ಅವರು ಹೊರಗೆ ಒದ್ದ ಚೆಂಡು ಗೋಲು ಪೋಸ್ಟ್‌ಗೆ ಬಡಿದು ಒಳಗೆ ಸೇರಿತು.

ADVERTISEMENT

ದ್ವಿತೀಯಾರ್ಧದಲ್ಲಿ ಮಿಂಚು: 1–0 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಬಿಎಫ್‌ಸಿ ದ್ವಿತೀಯಾರ್ಧದಲ್ಲಿ ಮತ್ತಷ್ಟು ಆಕ್ರಮಣಕ್ಕೆ ಮುಂದಾಯಿತು. ಎದುರಾಳಿ ತಂಡವೂ ಜಿದ್ದಾಜಿದ್ದಿಯ ಹೋರಾಟಕ್ಕೆ ಇಳಿಯಿತು. 60ನೇ ನಿಮಿಷದಲ್ಲಿ ಫೆಡರಿಕೊ ಗೊಲ್ಯಾಗೊ ನಾರ್ತ್ ಈಸ್ಟ್‌ಗೆ ಸಮಬಲದ ಗೋಲು ಗಳಿಸಿಕೊಟ್ಟರು. 71ನೇ ನಿಮಿಷದಲ್ಲಿ ಚೆಂಚೊ ಗೆಲ್ಶೆನ್‌ ಚೆಂಡನ್ನು ಗುರಿ ಮುಟ್ಟಿಸಿ ಬಿಎಫ್‌ಸಿ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

ಇಂದು ಬ್ಲಾಸ್ಟರ್ಸ್‌–ಡೈನಾಮೊಸ್ ಹಣಾಹಣಿ: ಗುರುವಾರ ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಡೆಲ್ಲಿ ಡೈನಾಮೊಸ್ ಎದುರು ಸೆಣಸಲಿದೆ.

13 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿರುವ ಬ್ಲಾಸ್ಟರ್ಸ್‌ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ತಂಡ ಏಳು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು ಐದರಲ್ಲಿ ಸೋತಿದೆ. ಡೈನಾಮೊಸ್‌ಗೆ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ. 12 ಪಂದ್ಯಗಳನ್ನು ಆಡಿರುವ ಈ ತಂಡ ಕೂಡ ಇಲ್ಲಿಯವರೆಗೆ ಗೆದ್ದಿರುವುದು ಒಂದರಲ್ಲಿ ಮಾತ್ರ. ಏಳು ಸೋಲು ಕಂಡಿರುವ ಡೈನಾಮೊಸ್‌ ನಾಲ್ಕನ್ನು ಡ್ರಾ ಮಾಡಿಕೊಂಡಿದೆ.

ಹೀಗಾಗಿ ಎರಡೂ ತಂಡಗಳ ಪ್ಲೇ ಆಫ್‌ ಹಂತಕ್ಕೆ ತಲುಪುವ ಸಾಧ್ಯತೆ ಕ್ಷೀಣಿಸಿದೆ. ಈಗ ತಂಡಗಳ ಮುಂದೆ ಇರುವುದು ಪಾಯಿಂಟ್ ಪಟ್ಟಿಯಲ್ಲಿ ಸಾಧ್ಯವಾದಷ್ಟು ಮೇಲೇರುವ ಪ್ರಯತ್ನ ಮಾತ್ರ. ಸಮಾನ ದುಃಖಿಗಳ ಈ ಪಂದ್ಯ ರೋಚಕವಾಗಲಿದೆ ಎಂಬುದು ಫುಟ್‌ಬಾಲ್ ಪ್ರಿಯರ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.