ADVERTISEMENT

ಐಎಸ್‌ಎಲ್‌ ಟೂರ್ನಿ: ಈಸ್ಟ್ ಬೆಂಗಾಲ್‌ಗೆ ಬ್ಲಾಸ್ಟರ್ಸ್‌ ಎದುರಾಳಿ

ಪಿಟಿಐ
Published 14 ಜನವರಿ 2021, 13:37 IST
Last Updated 14 ಜನವರಿ 2021, 13:37 IST
ಕೇರಳ ಬ್ಲಾಸ್ಟರ್ಸ್ ತಂಡದ ಜೋರ್ಡನ್ ಮರೆ –ಐಎಸ್‌ಎಲ್ ಮೀಡಿಯಾ ಚಿತ್ರ
ಕೇರಳ ಬ್ಲಾಸ್ಟರ್ಸ್ ತಂಡದ ಜೋರ್ಡನ್ ಮರೆ –ಐಎಸ್‌ಎಲ್ ಮೀಡಿಯಾ ಚಿತ್ರ   

ವಾಸ್ಕೊ, ಗೋವಾ: ಆರಂಭದಲ್ಲಿ ಕಳಪೆ ಆಟ ಆಡಿದರೂ ಹಿಂದಿನ ಮೂರು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ತೋರಿರುವ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶಕ್ರವಾರ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಲಿದೆ. ತಿಲಕ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.

‌ಡಿಸೆಂಬರ್‌ನಲ್ಲಿ ಮೊದಲ ಲೆಗ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಗೋಲು ಗಳಿಸಿ ಕೇರಳ ಬ್ಲಾಸ್ಟರ್ಸ್‌ 1–1ರಿಂದ ಡ್ರಾ ಮಾಡಿಕೊಂಡಿತ್ತು. ಆಗ ಬೆಂಗಾಲ್ ತಂಡ ನಿರೀಕ್ಷೆಗೆ ತಕ್ಕ ಆಟ ಪ್ರದರ್ಶಿಸಲಾಗದೆ ಸಂಕಷ್ಟದಲ್ಲಿತ್ತು. ನಂತರ ಆ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಕೋಚ್‌ ರಾಬಿ ಫಾವ್ಲರ್‌ ಅವರ ಪಡೆ ಕಳೆದ ಐದು ಪಂದ್ಯಗಳಲ್ಲಿ ಸೋಲು ಕಂಡಿಲ್ಲ. ಎರಡು ಜಯ ಹಾಗೂ ಮೂರು ಡ್ರಾದೊಂದಿಗೆ ತಂಡ ಉತ್ತಮ ಸಾಮರ್ಥ್ಯ ತೋರಿದೆ. ಪಾಯಿಂಟ್ ಪಟ್ಟಿಯಲ್ಲಿ ಬೆಂಗಾಲ್‌ಗೆ ಈಗ ಒಂಬತ್ತನೇ ಸ್ಥಾನ. ಹೀಗಾಗಿ ಅದು ಈಗ ಪ್ಲೇ ಆಫ್ ಹಂತಕ್ಕೇರುವ ಕನಸಿನಲ್ಲಿದೆ. ಆದರೆ ಆ ಹಾದಿ ಸುಗಮ ಅಲ್ಲ ಎಂಬುದರ ಅರಿವು ಫಾವ್ಲರ್ ಅವರಿಗಿದೆ.

‘ತಂಡದ ಹಾದಿ ಸುಗಮವಾಗಿಲ್ಲ. ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ಜನರು ಟೀಕಿಸುತ್ತಿದ್ದರು. ಆಗ ತಂಡ ಚೇತರಿಸಿಕೊಂಡಿತು. ನಮ್ಮದು ಆತ್ಮವಿಶ್ವಾಸ ಮತ್ತು ಭದ್ರ ತಳಪಾಯ ಹೊಂದಿರುವ ತಂಡ. ಸಾಕಷ್ಟು ಅವಕಾಶಗಳು ನಮ್ಮ ಮುಂದೆ ತೆರೆದುಕೊಂಡಿವೆ. ನಿರಂತರ ಪ್ರಯತ್ನದ ಮೂಲಕ ಅದನ್ನು ಸದುಪಯೋಗಪಡಿಸಿಕೊಳ್ಳಲು ಶ್ರಮಿಸಲಿದ್ದೇವೆ’ ಎಂದು ಫಾವ್ಲರ್‌ ಹೇಳಿದರು.

ADVERTISEMENT

ಆಕ್ರಮಣಕಾರಿ ಆಟವೇ ಈಸ್ಟ್‌ ಬೆಂಗಾಲ್ ತಂಡದ ಯಶಸ್ಸಿನ ಗುಟ್ಟು. ಆರಂಭದಲ್ಲಿ ಫಾರ್ವರ್ಡ್ ವಿಭಾಗ ಸತತ ವೈಫಲ್ಯ ಕಂಡಿತ್ತು. ಆದರೆ ಈಗ ಆ ವಿಭಾಗದ ಆಟಗಾರರು ಯಶಸ್ಸು ಕಾಣುತ್ತಿದ್ದಾರೆ. ಯುವ ಆಟಗಾರ ಎನೊಬಾಖರೆ ಸೇರ್ಪಡೆಯಾದ ನಂತರ ತಂಡದ ಶಕ್ತಿ ಹೆಚ್ಚಿದೆ. ನೈಜೀರಿಯಾದ ಈ ಆಟಗಾರ ಕಳೆದ ಮೂರು ಪಂದ್ಯಗಳಲ್ಲಿ ಗೋಲು ಗಳಿಸಿದ್ದಾರೆ. ಮಿಡ್‌ಫೀಲ್ಡ್ ವಿಭಾಗದ ಆಟಗಾರರು ಈವರೆಗೆ 10 ಗೋಲು ಗಳಿಸಿದ್ದಾರೆ. ಲೀಗ್‌ನಲ್ಲಿ ಯಾವುದೇ ತಂಡದ ಮಿಡ್‌ಫೀಲ್ಡರ್‌ಗಳು ಈ ರೀತಿಯ ಯಶಸ್ಸು ಕಾಣಲಿಲ್ಲ.

ಬ್ಲಾಸ್ಟರ್ಸ್ ಈ ವರೆಗೆ ಎದುರಾಳಿ ತಂಡಕ್ಕೆ 19 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಬೆಂಗಾಲ್‌ನಂತೆ ಬ್ಲಾಸ್ಟರ್ಸ್ ತಂಡದಲ್ಲೂ ಫಾರ್ವರ್ಡ್ ವಿಭಾಗದ ಆಟಗಾರರು ಸುಧಾರಣೆ ಕಂಡಿದ್ದಾರೆ. ತಂಡ ಈ ವರೆಗೆ 13 ಗೋಲುಗಳನ್ನು ಗಳಿಸಿದೆ. ಕೋಚ್ ಕಿಬು ವಿಕುನಾ ಪಡೆಯ ಬೇರೆ ಬೇರೆ ಆಟಗಾರರು ಈ ಗೋಲುಗಳನ್ನು ದಾಖಲಿಸಿದ್ದಾರೆ. ಇದು, ತಂಡದ ಎಲ್ಲ ವಿಭಾಗವೂ ಬಲಿಷ್ಠವಾಗಿದೆ ಎಂಬುದನ್ನು ತೋರಿಸುತ್ತದೆ.

‘ತಂಡ ಎಷ್ಟು ಗೋಲುಗಳನ್ನು ಬಿಟ್ಟುಕೊಟ್ಟಿದೆ ಎಂಬುದಕ್ಕಿಂತ ಎಷ್ಟು ಗೋಲುಗಳನ್ನು ಗಳಿಸಿದೆ ಎಂಬುದು ಮುಖ್ಯ. ಬಿಟ್ಟುಕೊಟ್ಟದ್ದಕ್ಕಿಂತ ಹೆಚ್ಚು ಗೋಲುಗಳನ್ನು ಗಳಿಸಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಹಿಂದಿನ ಕೆಲವು ಪಂದ್ಯಗಳಲ್ಲಿ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ ಎಂಬುದು ತಂಡದ ಹೆಗ್ಗಳಿಕೆ’ ಎಂದು ವಿಕುನ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.