ADVERTISEMENT

ಪಿತೃತ್ವ ಪತ್ತೆಗಾಗಿ ಮರಡೋನಾ ದೇಹ ಸಂರಕ್ಷಿಸಲು ಕೋರ್ಟ್‌ ಆದೇಶ

ರಾಯಿಟರ್ಸ್
Published 17 ಡಿಸೆಂಬರ್ 2020, 8:26 IST
Last Updated 17 ಡಿಸೆಂಬರ್ 2020, 8:26 IST
ಫುಟ್‌ಬಾಲ್‌ ದಿಗ್ಗಜ ಡಿಯಾಗೊ ಮರಡೋನಾ
ಫುಟ್‌ಬಾಲ್‌ ದಿಗ್ಗಜ ಡಿಯಾಗೊ ಮರಡೋನಾ   

ಬ್ಯೂನಸ್‌ ಐರಿಸ್‌ (ಅರ್ಜೆಂಟೀನಾ): ಪಿತೃತ್ವವನ್ನು ಪತ್ತೆ ಹಚ್ಚುವ ಪ್ರಕರಣವೊಂದರಲ್ಲಿ ಫುಟ್‌ಬಾಲ್‌ ದಿಗ್ಗಜ ಡಿಯಾಗೊ ಮರಡೋನಾ ಅವರ ಡಿಎನ್‌ಎ ಬೇಕಾಗಬಹುದು. ಆ ಹಿನ್ನೆಲೆಯಲ್ಲಿ ಅವರ ದೇಹವನ್ನು ಸಂರಕ್ಷಿಸಬೇಕು ಎಂದು ಅರ್ಜೆಂಟೀನಾ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಫುಟ್‌ಬಾಲ್ ಜಗತ್ತಿನ 'ಕಿರೀಟವಿಲ್ಲದ ಮಹಾರಾಜ' ಎಂಬ ಹಿರಿಮೆಗೆ ಪಾತ್ರರಾಗಿದ್ದ ಮರಡೋನಾ ಅವರು ನವೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಡಿಎನ್ಎ ಮಾದರಿಗಳನ್ನು ಈಗಾಗಲೇ ಸಂಗ್ರಹಿಸಿಕೊಳ್ಳಲಾಗಿದೆ ಎಂದು ಮರಡೋನಾ ಪರ ವಕೀಲರು ಈ ಹಿಂದೆ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದರು. ಆದರೆ, ನ್ಯಾಯಾಲಯವು, 'ಮುಂದಿನ ದಿನಗಳಲ್ಲಿ ಮರಡೋನಾ ಅವರ ಡಿಎನ್‌ಎ ಮಾದರಿಗಳು ಬೇಕಾಗಬಹುದು. ಆ ಕಾರಣ ಅವರ ದೇಹದ ಅಂತ್ಯಕ್ರಿಯೆ ಮಾಡಬಾರದು' ಎಂದು ತೀರ್ಪು ನೀಡಿದೆ.

ಈಗಾಗಲೇ, ಮರಡೋನಾ ಮಕ್ಕಳೆಂದು ಐದು ಮಂದಿಯನ್ನು ಗುರುತಿಸಲಾಗಿದೆ.

ADVERTISEMENT

ಆರು ಜನರು ಅರ್ಜೆಂಟೀನಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಮರಡೋನಾ ತಮ್ಮ ಜೈವಿಕ ತಂದೆ ಎಂಬುದಾಗಿ ಹೇಳಿಕೊಂಡಿದ್ದಾರೆ.

ಆರು ಜನರಲ್ಲಿ ಒಬ್ಬರಾದ 25 ವರ್ಷದ ಮಾಗ್ಲಿ ಗಿಲ್ ಎಂಬುವವರು, 'ಮರಡೋನಾ ನನ್ನ ಜೈವಿಕ ತಂದೆ ಎಂಬುದು ಎರಡು ವರ್ಷಗಳ ಹಿಂದೆ ನನ್ನ ಅರಿವಿಗೆ ಬಂದಿತು' ಎಂದು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಅರ್ಜೆಂಟೀನಾದಲ್ಲಿ ನಾಲ್ಕು ಮತ್ತು ಇಟಲಿಯಲ್ಲಿ ಒಬ್ಬ ಸೇರಿದಂತೆ ಒಟ್ಟು ಐದು ಮಕ್ಕಳನ್ನು ಮರಡೋನಾ ಹೊಂದಿರುವುದು ಈಗಾಗಲೇ ಬಹಿರಂಗಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.