ಬೆಲ್ಗ್ರೇಡ್:ಇಲ್ಲಿನ ರೆಡ್‌ಬುಲ್ ಮೈದಾನದಲ್ಲಿ ನಡೆದ ಕ್ರ್ವೆನಾ ಜ್ವೆಜ್ಡಾ ಕ್ಲಬ್ ವಿರುದ್ಧದ ಪಂದ್ಯದಲ್ಲಿಬಯೆರ್ನ್ ಮ್ಯೂನಿಚ್ ಆಟಗಾರರಾಬರ್ಟ್ ಲೆವಂಡೊಸ್ಕಿ, ಕೇವಲ15 ನಿಮಿಷಗಳ ಅಂತರದಲ್ಲಿ ನಾಲ್ಕು ಗೋಲುಗಳನ್ನು ಬಾರಿಸಿ ದಾಖಲೆ ಬರೆದರು.ರಾಬರ್ಟ್ ಗೋಲುಗಳ ಬಲದಿಂದ ಬರೇನ್ ತಂಡ 6–0 ಅಂತರದಿಂದ ಗೆದ್ದು ಬೀಗಿತು.
ಇಂದು ನಡೆದ ಪಂದ್ಯದಲ್ಲಿ 53, 60, 64 ಹಾಗೂ 67ನೇ ನಿಮಿಷದಲ್ಲಿ ಗೋಲು ಬಾರಿಸಿದ ರಾಬರ್ಟ್ ಆಮೂಲ, ಯುರೋಪಿಯನ್ ಚಾಂಪಿಯನ್ಸ್ ಲೀಗ್ ಇತಿಹಾಸದಲ್ಲೇ ವೇಗವಾಗಿ ನಾಲ್ಕು ಗೋಲು ಗಳಿಸಿದ ಆಟಗಾರ ಎನಿಸಿದರು. ಈ ಬಾರಿ ಲೀಗ್‌ನಲ್ಲಿಒಟ್ಟು 10 ಗೋಲು ಗಳಿಸಿರುವ ರಾಬರ್ಟ್ ಹೆಚ್ಚು ಗೋಲುಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರು.
ಉಳಿದೆರಡು ಗೋಲುಗಳನ್ನು ಲಿಯೋನ್ ಗೊರೆಟ್ಜ್‌ಕಾ(14ನೇ ನಿಮಿಷ) ಮತ್ತು ಕೊರೆಂಟಿನ್ ಟೊಲಿಸ್ಸೊ(89ನೇ ನಿಮಿಷ) ದಾಖಲಿಸಿದರು.
ಪಂದ್ಯದ ಬಳಿಕ ಮಾತನಾಡಿದ ರಾಬರ್ಟ್, ‘ಯಾರು ಚೆನ್ನಾಗಿ ಆಡಿದರು ಎಂಬುದಕ್ಕಿಂತ,ನಾವೆಲ್ಲ ತಂಡದ ಯೋಜನೆಯಂತೆ ಆಡಿದೆವು ಎಂಬುದು ಗಮನಾರ್ಹ ಸಂಗತಿ. ರಕ್ಷಣಾತ್ಮಕವಾಗಿ ಮತ್ತು ಆಕ್ರಮಣಕಾರಿಯಾಗಿ ತುಂಬಾ ಚೆನ್ನಾಗಿ ಆಡಿದೆವು ಎಂಬುದೇ ಮುಖ್ಯ’ ಎಂದು ಹೇಳಿದರು.
‘ಈ ಹಿಂದೆ ನಾನು ಗೋಲು ಗಳಿಸದಿದ್ದಾಗಲೂ ತಂಡ ಗೆಲುವು ಸಾಧಿಸಿದಾಗ ಆದಷ್ಟೇ ಸಂತಸ ಈಗಲೂ ಆಗಿದೆ’ ಎಂದರು. ಶನಿವಾರ ನಡೆದ ಪಂದ್ಯದಲ್ಲಿ ಫೋರ್ಟುನಾ ಎದುರು ಬಯೆರ್ನ್ 4–0 ಅಂತರದಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ರಾಬರ್ಟ್‌ಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ.
2015ರಲ್ಲಿ ಬಂದೇಸ್ಲಿಗಾ ಲೀಗ್‌ನಲ್ಲಿಯೂ ಇಂತಹದೇ ಪ್ರದರ್ಶನ ನೀಡಿದ್ದ ರಾಬರ್ಟ್, ವೋಲ್ಫ್‌ಬರ್ಗ್ ತಂಡದೆದುರು ಕೇವಲ 9 ನಿಮಿಷಗಳಲ್ಲಿ 5ಗೋಲು ಬಾರಿಸಿದ್ದರು. ಪೋಲೆಂಡ್ ಆಟಗಾರನಾಗಿರುವ ರಾಬರ್ಡ್ ಬಯೆರ್ನ್ ಪರ ಇದುವರೆಗೆ ಒಟ್ಟು 20 ಪಂದ್ಯಗಳನ್ನು ಆಡಿದ್ದು, ಅವರ ಖಾತೆಯಲ್ಲಿ 27 ಗೋಲುಗಳಿವೆ.
ಲೀಗ್‌ನ ಗುಂಪು ಹಂತದಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಗೆಲುವು ಕಂಡಿರುವ ಬಯೆರ್ನ್ 16ರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.