ADVERTISEMENT

ಐಎಸ್‌ಎಲ್: ಗೋವಾ ಜಯಭೇರಿ

ಪಿಟಿಐ
Published 9 ಡಿಸೆಂಬರ್ 2019, 14:15 IST
Last Updated 9 ಡಿಸೆಂಬರ್ 2019, 14:15 IST
ಪಂದ್ಯ ಗೆದ್ದ ನಂತರ ಗೋವಾ ತಂಡದ ಆಟಗಾರರು ಸಂಭ್ರಮಿಸಿದರು
ಪಂದ್ಯ ಗೆದ್ದ ನಂತರ ಗೋವಾ ತಂಡದ ಆಟಗಾರರು ಸಂಭ್ರಮಿಸಿದರು   

ಹೈದರಾಬಾದ್: ಮನ್‌ವೀರ್ ಸಿಂಗ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು.

ಜಿಎಂಸಿ ಬಾಲಯೋಗಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದ 68ನೇ ನಿಮಿಷದಲ್ಲಿ ಮನ್‌ವೀರ್ ಚೆಂಡನ್ನು ಗುರಿ ಮುಟ್ಟಿಸಿದರು. ಅವರು ಬದಲಿ ಆಟಗಾರನಾಗಿ ಕಣಕ್ಕೆ ಇಳಿದಿದ್ದರು. ಈ ಗೆಲುವಿನೊಂದಿಗೆ ಗೋವಾ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ಹೊಸ ಕೋಚ್ ಒವೆನ್ ಕೋಯ್ಲ್‌ಗೆ ಸವಾಲಿನ ಪಂದ್ಯ: ಜೆಮ್‌ಶೆಡ್‌ಪುರದಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಜೆಮ್‌ಶೆಡ್‌ಪುರ ಎಫ್‌ಸಿಯನ್ನು ಎದುರಿಸಲಿದೆ. ಹೊಸ ಕೋಚ್ ಒವೆನ್ ಕೋಯ್ಲ್ ನೇಮಕವಾದ ನಂತರ ಚೆನ್ನೈಯಿನ್‌ಗೆ ಮೊದಲ ಪಂದ್ಯ ಇದು. 6 ಪಂದ್ಯಗಳಲ್ಲಿ ಕೇವಲ ಒಂದು ಜಯ ಗಳಿಸಿರುವ ಚೆನ್ನೈಯಿನ್‌ನ ತಂಡದ ಹಿಂದಿನ ಕೋಚ್ ಜಾನ್ ಗ್ರೆಗರಿ ಕಳೆದ ವಾರ ರಾಜೀನಾಮೆ ನೀಡಿದ್ದರು.

ADVERTISEMENT

ಜೆಮ್‌ಶೆಡ್‌ಪುರ ಎಫ್‌ಸಿ ಆರು ಪಂದ್ಯಗಳಲ್ಲಿ 3 ಜಯ, 2 ಡ್ರಾದೊಂದಿಗೆ ಪಾಯಿಂಟ್ ಪಟ್ಟಿಯ 4ನೇ ಸ್ಥಾನದಲ್ಲಿದೆ. ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಈ ತಂಡ ಜಯದಿಂದ ವಂಚಿತವಾಗಿತ್ತು. ಸರ್ಗಿಯೋ ಕ್ಯಾಸಲ್ ಹಾಗೂ ಫಾರೂಖ್ ಚೌಧರಿ ತಂಡಕ್ಕೆ ಆಧಾರವಾಗಿದ್ದಾರೆ. ಸ್ಪೇನ್‌ನ ಕ್ಯಾಸಲ್ ಈಗಾಗಲೇ 5 ಗೋಲು ಗಳಿಸಿದ್ದಾರೆ. ಮಿಡ್‌ಫೀಲ್ಡ್ ವಿಭಾಗದಲ್ಲಿ ಜಿತೇಂದ್ರ ಸಿಂಗ್ ಮತ್ತು ನರೇಂದ್ರ ಗೆಹ್ಲೋಟ್ ಮಿಂಚುತ್ತಿದ್ದಾರೆ.

ಎರಡು ಬಾರಿಯ ಚಾಂಪಿಯನ್ ಚೆನ್ನೈಯಿನ್ ಕಳೆದ ಆವೃತ್ತಿಯಲ್ಲಿ ಕಳಪೆ ಆಟ ಆಡಿತ್ತು. ಈ ಬಾರಿ ಇಲ್ಲಿಯ ತನಕ ತಂಡಕ್ಕೆ ಸುಧಾರಿಸಿಕೊಳ್ಳಲು ಆಗಲಿಲ್ಲ.

‘ಪಂದ್ಯಗಳನ್ನು ಗೆಲ್ಲುವುದು ಹಾಗೂ ತಂಡವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸುವುದು ನನ್ನ ಮೊದಲ ಗುರಿ. ತಂಡವನ್ನು ಪ್ಲೇ ಆಫ್ ಹಂತದ ವರೆಗೆ ಕೊಂಡೊಯ್ಯುವ ಸಾಮರ್ಥ್ಯ ಇರುವ ಆಟಗಾರರು ನಮ್ಮಲ್ಲಿ ಇದ್ದಾರೆ’ ಎಂದು ಕೋಯ್ಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.