ಗೋಲು ಗಳಿಸಿದ ಸಂಭ್ರಮದಲ್ಲಿ ಬೆಂಗಳೂರು ಎಫ್‌ಸಿ ತಂಡದ ಆಟಗಾರರು
–ಎಕ್ಸ್ ಚಿತ್ರ
ಬೆಂಗಳೂರು: ರಾಹುಲ್ ಭೆಕೆ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಮಂಗಳವಾರ ತವರಿನಲ್ಲಿ ಮತ್ತೊಮ್ಮೆ ಗೆಲುವಿನ ಸಂಭ್ರಮ ಆಚರಿಸಿತು. ಇಂಡಿಯನ್ ಸೂಪರ್ ಲೀಗ್‌ನ ಪಂದ್ಯದಲ್ಲಿ 1–0ಯಿಂದ ಚೆನ್ನೈಯಿನ್ ಎಫ್‌ಸಿ ತಂಡವನ್ನು ಮಣಿಸಿ ಪ್ಲೇ ಆಫ್ ಸ್ಥಾನವನ್ನು ಖಚಿತ ಪಡಿಸಿಕೊಂಡಿತು.
ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 37ನೇ ನಿಮಿಷದಲ್ಲಿ ರಾಹುಲ್ ಚೆಂಡನ್ನು ಗುರಿ ಸೇರಿಸಿ, ಬಿಎಫ್‌ಸಿ ತಂಡಕ್ಕೆ 1–0 ಮುನ್ನಡೆ ಒದಗಿಸಿದರು. ಅದೇ ಅಂತರವನ್ನು ಕೊನೆಯವರೆಗೆ ಉಳಿಸುವಲ್ಲಿ ಆತಿಥೇಯ ತಂಡ ಯಶಸ್ವಿಯಾಯಿತು.
ಹ್ಯಾಟ್ರಿಕ್ ಸೋಲಿನಿಂದ ಪುನರಾಗಮನ ಮಾಡಿರುವ ಸುನಿಲ್ ಚೆಟ್ರಿ ಬಳಗವು ಈ ಗೆಲುವಿನೊಂದಿಗೆ ಸತತ ಮೂರು ಪಂದ್ಯಗಳನ್ನು ಗೆದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಲೀಗ್ ಹಂತದಲ್ಲಿ ಎರಡು ಪಂದ್ಯ ಬಾಕಿ ಇರುವಂತೆ ಬಿಎಫ್‌ಸಿ ತಂಡವು ಪ್ಲೇ ಆಫ್ ಸ್ಥಾನವನ್ನು ಗಟ್ಟಿಗೊಳಿಸಿತು.
ಈ ಆವೃತ್ತಿಯಲ್ಲಿ ಬೆಂಗಳೂರು ತಂಡಕ್ಕೆ ಇದು 11ನೇ ಗೆಲುವು. ನಾಲ್ಕು ಡ್ರಾ, ಏಳು ಸೋಲಿನೊಂದಿಗೆ 37 ಅಂಕ ಗಳಿಸಿದೆ. ಹಾಲಿ ಚಾಂಪಿಯನ್ ಮೋಹನ್ ಬಾಗನ್ ಸೂಪರ್ ಜೈಂಟ್ಸ್ (52) ಅಗ್ರಸ್ಥಾನದಲ್ಲಿದೆ. ಗೋವಾ ಎಫ್‌ಸಿ (42) ನಂತರದ ಸ್ಥಾನದಲ್ಲಿದೆ.
ಈ ಸೋಲಿನಿಂದ ಚೆನ್ನೈಯಿನ್ ತಂಡದ ಪ್ಲೇ ಆಫ್ ಕನಸು ಕಮರಿತು. ತಂಡವು 22 ಪಂದ್ಯಗಳಿಂದ 24 ಅಂಕ ಪಡೆದಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ಎರಡು ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿವೆ. ಉಳಿದ ಎರಡು ಸ್ಥಾನಕ್ಕಾಗಿ ಮೂರರಿಂದ ಆರನೇ ಸ್ಥಾನದಲ್ಲಿರುವ ತಂಡಗಳು ಪೈಪೋಟಿ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.