ಇಂಡಿಯನ್ ಸೂಪರ್ ಲೀಗ್ ಕಿರೀಟ ಗೆದ್ದ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡದ ಆಟಗಾರರ ಸಂಭ್ರಮ
- ಪಿಟಿಐ ಚಿತ್ರ
ಕೋಲ್ಕತ್ತ: ಕೊನೆಯ ಹಂತದಲ್ಲಿ ಜೇಮಿ ಮ್ಯಾಕ್ಲರೆನ್ ಗಳಿಸಿದ ಗೋಲಿನ ನೆರವಿನಿಂದ ಆತಿಥೇಯ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡವು ಇಂಡಿಯನ್ ಸೂಪರ್ ಲೀಗ್ ಫೈನಲ್‌ನಲ್ಲಿ ಶನಿವಾರ 2–1 ಗೋಲುಗಳಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವನ್ನು ಮಣಿಸಿ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಂಡಿದ್ದ ಸುನಿಲ್ ಚೆಟ್ರಿ ಬಳಗಕ್ಕೆ ನಿರಾಸೆಯಾಯಿತು. 2018–19ರ ಆವೃತ್ತಿಯಲ್ಲಿ ಬೆಂಗಳೂರು ತಂಡವು ಚಾಂಪಿಯನ್ ಆಗಿತ್ತು. ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದ್ದ ಬಿಎಫ್‌ಸಿ ತಂಡವು ಮೂರನೇ ಬಾರಿ ರನ್ನರ್ಸ್ ಅಪ್ ಆಯಿತು.
ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಮೊದಲಾರ್ಧ ಯಾವುದೇ ತಂಡಕ್ಕೆ ಗೋಲು ದಕ್ಕಲಿಲ್ಲ. ಆದರೆ, ಮೋಹನ್ ಬಾಗನ್ ತಂಡದ ಆಲ್ಬರ್ಟೊ ರಾಡ್ರಿಗಸ್ 49ನೇ ನಿಮಿಷದಲ್ಲಿ ‘ಉಡುಗೊರೆ’ ಗೋಲು ನೀಡಿದ್ದರಿಂದ ಬೆಂಗಳೂರು ತಂಡವು ಆರಂಭದ ಮುನ್ನಡೆ ಪಡೆಯಿತು. ಆದರೆ, ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ.
71ನೇ ನಿಮಿಷದಲ್ಲಿ ಬಾಗನ್ ತಂಡದ ಜೇಸನ್ ಕಮಿಂಗ್ಸ್ ಅವರು ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿದರು. ಹೀಗಾಗಿ ತಂಡಗಳ ಸ್ಕೋರ್ 1–1ರಿಂದ ಸಮಬಲಗೊಂಡಿತು. ನಂತರದಲ್ಲಿ ಎರಡು ತಂಡಗಳೂ ಮೇಲುಗೈ ಸಾಧಿಸಲು ಸಾಕಷ್ಟು ಕಸರತ್ತು ನಡೆಸಿದವು. 96ನೇ ನಿಮಿಷದಲ್ಲಿ ಬೆಂಗಳೂರು ತಂಡದ ರಕ್ಷಣಾ ವ್ಯೂಹವನ್ನು ಭೇದಿಸಿದ ಜೇಮಿ ಮ್ಯಾಕ್ಲರೆನ್ ಅವರು ಅಮೋಘವಾಗಿ ಗೆಲುವಿನ ಗೋಲು ದಾಖಲಿಸಿದರು.
ಲೀಗ್ ಹಂತದ ಪಂದ್ಯಗಳ ನಂತರ ಬಾಗನ್ ಅಗ್ರಸ್ಥಾನ ಪಡೆದಿದ್ದರೆ, ಬೆಂಗಳೂರಿನ ತಂಡ ಮೂರನೇ ಸ್ಥಾನ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.