
ಮೆಸ್ಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಾಯಕ ಚಾರ್ಲ್ಸ್ ಆಂಟೋನಿ
ಪಿಟಿಐ ಚಿತ್ರ
ಕೋಲ್ಕತ್ತ: ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಭಾರತ ಭೇಟಿ ವೇಳೆ ಇಲ್ಲಿಯ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ ಲಂಡನ್ ಮೂಲದ ಭಾರತೀಯ ಗಾಯಕ ಚಾರ್ಲ್ಸ್ ಆ್ಯಂಟೊನಿ ಗಲಾಟೆ ನಡೆದ ವೇಳೆ ತಮಗಾದ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ.
ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದ ಪ್ರಸಿದ್ಧ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಕೋಲ್ಕತ್ತ ಭೇಟಿಯ ವೇಳೆ ಸಾಲ್ಟ್ ಲೇಕ್ ಮೈದಾನದಿಂದ ನಿಗದಿತ ಸಮಯಕ್ಕಿಂತ ಮುನ್ನವೇ ನಿರ್ಗಮಿಸಿದ್ದರಿಂದ, ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಆಕ್ರೋಶಗೊಂಡು ಬಾಟಲ್ ಹಾಗೂ ಕುರ್ಚಿಗಳನ್ನು ಮೈದಾನದತ್ತ ಎಸೆದು ದಾಂಧಲೆ ನಡೆಸಿದ್ದರು.
ಈ ಸಂದರ್ಭದಲ್ಲಿ ಮೈದಾನದಲ್ಲಿದ್ದ ಗಾಯಕ ಆ್ಯಂಟೊನಿ ತಮಗಾದ ಭಯಾನಕ ಅನುಭವವನ್ನು ಹಂಚಿಕೊಂಡು, ‘ಜೀವ ಉಳಿಸಿಕೊಳ್ಳಲು ಓಡಿದ್ದೆ’ ಎಂದು ಪಿಟಿಐ ಜತೆಗೆ ಮಾತನಾಡಿದ್ದಾರೆ.
‘ನಾನು ಮೆಸ್ಸಿ ಅವರನ್ನು ನೋಡುತ್ತಿದ್ದೆ, ಅವರು ನಗುತ್ತಿದ್ದರು. ಆದರೆ ಅವರ ಮುಖದಲ್ಲಿ ಆತಂಕದ ಛಾಯೆ ಕಾಣಿಸುತ್ತಿತ್ತು. ನಾನು ಅದೃಷ್ಟವಂತ ಯಾಕೆಂದರೆ ನನಗೆ ಯಾವುದೇ ಗಾಯಗಳಾಗಿಲ್ಲ, ನನ್ನ ಯಾವುದೇ ವಸ್ತುಗಳಿಗೂ ಹಾನಿಯಾಗಿಲ್ಲ’ ಎಂದಿದ್ದಾರೆ.
ಕ್ರೀಡಾಂಗಣದಿಂದ ಮೆಸ್ಸಿ ನಿರ್ಗಮಿಸುತ್ತಿದ್ದಂತೆ ₹4ಸಾವಿರ, ₹12 ಸಾವಿರ, ₹20ಸಾವಿರದಷ್ಟು ಹಣ ಕೊಟ್ಟು ಟಿಕೆಟ್ ಖರೀದಿಸಿ ಬಂದಿದ್ದ ಅಭಿಮಾನಿಗಳು ಸಿಟ್ಟಿಗೆದ್ದು, ವೀಕ್ಷಕರ ಗ್ಯಾಲರಿಯಿಂದ ನೀರಿನ ಬಾಟಲಿ, ಆಹಾರದ ಪೊಟ್ಟಣ, ಕಲ್ಲು, ಲೋಹದ ವಸ್ತುಗಳನ್ನು ಎಸೆಯುತ್ತಿದ್ದರು.
ದಾಂಧಲೆ ಉಂಟಾಗುತ್ತಿದ್ದಂತೆ ಸುರಕ್ಷಿತ ಸ್ಥಳಕ್ಕೆ ಓಡುವಂತೆ ಪೊಲೀಸರು ನನಗೆ ಹೇಳಿದರು. ಗಿಟಾರ್, ಕೇಬಲ್ ಸೇರಿದಂತೆ ಏನೆಲ್ಲಾ ಸಾಧ್ಯವೋ ಎಲ್ಲವನ್ನು ಎತ್ತಿಕೊಂಡು ಓಡಿದ್ದೆ. ಎಲ್ಲರೂ ವಿವಿಐಪಿಗಳ ಬಗ್ಗೆ ತಲೆಕೆಡಿಸಿಕೊಂಡರೇ ಹೊರತು ನನ್ನ ಸುರಕ್ಷತೆ ಬಗ್ಗೆ ಯಾರೂ ಕೇಳಲಿಲ್ಲ. ಬೇರೆಡೆ ನೋಡಲೂ ನನಗೆ ಸಮಯವಿರಲಿಲ್ಲ. ಜೀವ ಉಳಿಸಿಕೊಳ್ಳಲು ಓಡಿದ್ದೆ. ಬೆಂಗಳೂರು, ಅಸ್ಸಾಂ, ಮೇಘಾಲಯ ಸೇರಿದಂತೆ ಹಲವೆಡೆಯಿಂದ ಜನರು ಬಂದಿದ್ದರು. ಅವರು ಮೆಸ್ಸಿಯನ್ನು ನೋಡಲು ಸಹ ಆಗಲಿಲ್ಲ. ಅನೇಕರು ಅಳುತ್ತಿರುವುದನ್ನು ಕಂಡಿದ್ದೇನೆ’ ಎಂದಿದ್ದಾರೆ.
‘2016ರಲ್ಲಿ ಡಿಯಾಗೊ ಮರಡೊನಾ ಭಾರತಕ್ಕೆ ಭೇಟಿ ನೀಡಿದ್ದ ವೇಳೆಯೂ ನಾನು ಪಾಲ್ಗೊಂಡಿದ್ದೆ. ಆಗ ಈ ರೀತಿಯ ಯಾವ ಸಮಸ್ಯೆಯೂ ಆಗಿರಲಿಲ್ಲ. ಆ ವೇಳೆ ನಾನು ಪ್ರದರ್ಶನವನ್ನೂ ನೀಡಿದ್ದೆ. ಈ ಬಾರಿಯೂ ಕೆಲವು ಹಾಡುಗಳನ್ನು ಹಾಡಲು ಅವಕಾಶ ಸಿಕ್ಕಿತ್ತು. ಮೆಸ್ಸಿ ಮತ್ತು ಮರಡೊನಾ ಇಬ್ಬರ ಕಾರ್ಯಕ್ರಮದಲ್ಲೂ ಹಾಡಿದ ಖುಷಿ ಇದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.