ಬೆಂಗಳೂರು/ಕೋಲ್ಕತ್ತ: ಕೋಲ್ಕತ್ತದಲ್ಲಿ ಈಚೆಗೆ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಫೈನಲ್ ಪಂದ್ಯದಲ್ಲಿ ಗೆದ್ದ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡದ ಅಭಿಮಾನಿಗಳ ಪುಂಡಾಟಿಕೆಯಿಂದಾಗಿ ಬೆಂಗಳೂರು ಎಫ್‌ಸಿ ತಂಡದ ಮಾಲೀಕರು ಮತ್ತು ಬೆಂಬಲಿಗರು ಗಾಯಗೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಬಾಗನ್ ತಂಡವು ಬಿಎಫ್‌ಸಿ ಎದುರು ಜಯಿಸಿತ್ತು. ಬಾಗನ್ ತಂಡದ ಅಭಿಮಾನಿಗಳೆನ್ನಲಾದ ಕೆಲವು ಕಿಡಿಗೇಡಿಗಳು ಸುಡುಮದ್ದುಗಳನ್ನು ಬಿಎಫ್‌ಸಿ ಬೆಂಬಲಿಗರ ಸ್ಟ್ಯಾಂಡ್‌ಗೆ ಒಗೆದಿದ್ದಾರೆ. ಘಟನೆಯಲ್ಲಿ ಒಬ್ಬ ಅಭಿಮಾನಿಯ ಕಣ್ಣಿಗೆ ಗಾಯವಾಗಿದೆ.
ಬಿಎಫ್‌ಸಿಯು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಗೆ ದೂರು ನೀಡಿದೆ.
‘ಬೆಂಗಳೂರು ಎಫ್‌ಸಿ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಪ್ರವಾಸಿ ತಂಡದ ಅಭಿಮಾನಿಗಳ ಮೇಲೆ ಆತಿಥೇಯ ಬೆಂಬಲಿಗರು ನಡೆಸಿರುವ ದಾಳಿಯು ಅಮಾನವೀಯವಾಗಿದೆ. ಸುಡುಮದ್ದುಗಳನ್ನು ಅಭಿಮಾನಿಗಳ ಗ್ಯಾಲರಿಗೆ ತೂರಿದರು. ಈ ಘಟನೆಯಲ್ಲಿ ಕ್ಲಬ್ ಮಾಲೀಕರಾದ ಪಾರ್ಥ್ ಜಿಂದಾಲ್ ಅವರಿಗೂ ಸುಟ್ಟ ಗಾಯಗಳಾಗಿವೆ’ ಎಂದು ತಂಡವು ದೂರಿನಲ್ಲಿ ಉಲ್ಲೇಖಿಸಿದೆ.
‘ಈ ಕುರಿತು ನಾವು ಎಐಎಫ್‌ಎಫ್‌ಗೆ ದೂರು ನೀಡಿದ್ದೇವೆ. ಕ್ರೀಡಾಂಗಣಗಳಲ್ಲಿ ಆಟಗಾರರು ಮತ್ತು ಅಭಿಮಾನಿಗಳಿಗೆ ಭದ್ರತೆ ನೀಡಬೇಕು. ಎಐಎಫ್‌ಎಫ್ ಮತ್ತು ಎಫ್‌ಎಸ್‌ಡಿಎಲ್ ಜಂಟಿಯಾಗಿ ಈ ಕುರಿತು ಗಂಭೀರವಾಗಿ ಚಿಂತಿಸಿ ಪರಿಹಾರ ಕಂಡುಹಿಡಿಯಬೇಕು. ಅಭಿಮಾನಿಗಳ ಸುರಕ್ಷತೆಗೆ ಕಟ್ಟುನಿಟ್ಟಾದ ರಕ್ಷಣಾ ವ್ಯವಸ್ಥೆ ರೂಪಿಸಬೇಕು’ ಎಂದು ತಂಡವು ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.