
ಕಾರಿನಲ್ಲಿ ಲಯೊನೆಲ್ ಮೆಸ್ಸಿ
– ಎಕ್ಸ್ ಚಿತ್ರ
ಕೋಲ್ಕತ್ತ: ನೆಚ್ಚಿನ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿಯನ್ನು ಕಣ್ತುಂಬಿಕೊಳ್ಳಬೇಕು ಎಂದು ರಾತ್ರಿಯಿಂದಲೇ ಏರ್‌ಪೋರ್ಟ್‌ನಲ್ಲಿ ಕಾದು ಕುಳಿತಿದ್ದ ಹಲವು ಅಭಿಮಾನಿಗಳಿಗೆ ನಿರಾಸೆಯಾಯಿತು. ಭಾರಿ ಭದ್ರತೆ ಇದ್ದಿದ್ದರಿಂದ ಒಂದು ಕ್ಷಣವಾದರೂ ಮೆಸ್ಸಿಯನ್ನು ನೋಡಬೇಕು ಎಂದು ಬಂದಿದ್ದ ಹಲವು ಅಭಿಮಾನಿಗಳಿಗೆ ಅದು ಸಾಧ್ಯವಾಗಲಿಲ್ಲ.
ಬಿಗಿ ಭದ್ರತೆಯೊಂದಿಗೆ ಏರ್‌ಪೋರ್ಟ್‌ನಿಂದ ನಿರ್ಗಮಿಸಿದ ಮೆಸ್ಸಿ ನಸುಕಿನ 3.30ಕ್ಕೆ ಹಿಂಬದಿ ಗೇಟ್‌ನ ಮೂಲಕ ಹೋಟೆಲ್‌ಗೆ ಪ್ರವೇಶಿಸಿದರು. ಹೋಟೆಲ್ ಮುಂದೆ ಕಾದಿದ್ದ ಸಾವಿರಾರು ಅಭಿಮಾನಿಗಳಿಗೆ ಆಶಾಭಂಗವಾಯಿತು.
‘ಗಲ್ಫ್ ಸ್ಟ್ರೀಮ್–ವಿ’ ಖಾಸಗಿ ವಿಮಾನದಲ್ಲಿ ಬಂದ ಮೆಸ್ಸಿಯನ್ನು, ಏರ್‌ಪೋರ್ಟ್‌ನ ಕೆಲ ‘ಅದೃಷ್ಟವಂತ’ ಸಿಬ್ಬಂದಿಯಷ್ಟೇ ಕಣ್ತುಂಬಿಕೊಂಡರು. ಬಿಳಿ ಟಿ–ಶರ್ಟ್ ಮೇಲೆ ಕಪ್ಪು ಸೂಟ್ ಧರಿಸಿದ್ದ ಅವರು, ಪೊಲೀಸ್ ಪಹರೆ ಮಧ್ಯೆಯೇ ಹೋಟೆಲ್‌ಗೆ ತೆರಳಿದರು.
ಅವರಿಗಾಗಿ ಕಾಯ್ದಿರಿಸಿದ್ದ ಹ್ಯಾಟ್ ರೀಜೆನ್ಸಿ ಹೋಟೆಲ್ ಮುಂದೆ ಸೇರಿದ್ದ ಸಾವಿರಾರು ಮಂದಿ ‘ಮೆಸ್ಸಿ ಮೆಸ್ಸಿ’ ಎಂದು ಕೂಗುತ್ತಿದ್ದರು.
ಹೋಟೆಲ್‌ನ ಲಾಬಿ ಅರ್ಜೆಂಟೀನಾ ಅಭಿಮಾನಿಗಳ ಕ್ಲಬ್‌ನಂತೆ ಕಾಣಿಸುತ್ತಿತ್ತು. ಆಕಾಶ ನೀಲಿ ಜೆರ್ಸಿಗಳು ಮತ್ತು ಧ್ವಜಗಳಿಂದ ಕೂಡಿತ್ತು. ಹಸುಗೂಸು ಹೊತ್ತುಕೊಂಡು ಬಂದ ತಾಯಂದಿರೂ ಮೆಸ್ಸಿಗಾಗಿ ಕಾದು ಕುಳಿತಿದ್ದರು. ಕಾದು ಕಾದು ಸುಸ್ತಾಗಿದ್ದರೂ ಉತ್ಸಾಹ ಕಳೆದುಕೊಳ್ಳದ ಅಭಿಮಾನಿಗಳೂ ಇದ್ದರು.
ಹೋಟೆಲ್‌ನ ಏಳನೇ ಮಹಡಿಯಲ್ಲಿರುವ 730ರ ಕೊಠಡಿಗೆ ಮೆಸ್ಸಿ ಚೆಕ್‌ಇನ್ ಆದರು. ಭದ್ರತೆಗಾಗಿ ಏಳನೇ ಮಹಡಿಯನ್ನು ಸೀಲ್ ಮಾಡಲಾಗಿದೆ. ಭಾರಿ ಭದ್ರತೆ ಇದ್ದಿದ್ದರಿಂದ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸುವ ಹಲವು ಅಭಿಮಾನಿಗಳ ಆಸೆಯೂ ಈಡೇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.