ಕೋಲ್ಕತ್ತ: ಮೆಸ್ಸಿ ಕೋಲ್ಕತ್ತ ಭೇಟಿಯ ವೇಳೆ ಸಾಲ್ಟ್ ಲೇಕ್ ಮೈದಾನದಲ್ಲಿ ನಡೆದ ಘಟನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೇ ಹೊಣೆ ಎಂದು ಬಿಜೆಪಿ ಕಿಡಿಕಾರಿದೆ.
ಮೂರು ದಿನಗಳ ಭಾರತದ ಪ್ರವಾಸದಲ್ಲಿರುವ ಪ್ರಸಿದ್ಧ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಕೋಲ್ಕತ್ತಾ ಭೇಟಿಯ ವೇಳೆ ಸಾಲ್ಟ್ ಲೇಕ್ ಮೈದಾನದಿಂದ ನಿಗದಿತ ಸಮಯಕ್ಕಿಂತ ಮುನ್ನವೇ ನಿರ್ಗಮಿಸಿದ್ದರಿಂದ, ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಆಕ್ರೋಶಗೊಂಡು ಬಾಟಲ್ ಹಾಗೂ ಕುರ್ಚಿಗಳನ್ನು ಮೈದಾನದತ್ತ ಎಸೆದಿದ್ದಾರೆ.
ಕಾರ್ಯಕ್ರಮವನ್ನು ಅತಿಕೆಟ್ಟದ್ದಾಗಿ ಆಯೋಜಿಸುವ ಮೂಲಕ ಮಮತಾ ಬ್ಯಾನರ್ಜಿ, ಜಾಗತಿಕವಾಗಿ ಭಾರತವು ತಲೆತಗ್ಗಿಸುವಂತೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಜನರ ಭಾವನೆಗಳ ಜೊತೆ ಆಟವಾಡಿದ್ದಾರೆ. ಮೆಸ್ಸಿ ಭೇಟಿಯನ್ನು ರಾಜಕೀಯ ಉದ್ದೇಶದಿಂದ ಬಳಸಿಕೊಳ್ಳಲು ಟಿಎಂಸಿ ನೋಡಿದೆ. ತಕ್ಷಣವೇ ಮಮತಾ ಬ್ಯಾರ್ನರ್ಜಿ ಮತ್ತು ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಮೆಸ್ಸಿ ಕಾರ್ಯಕ್ರಮಕ್ಕೆ ಟಿಕೆಟ್‌ಗೆ ತಲಾ ₹10 ಸಾವಿರ ಇಡಲಾಗಿದೆ. ಅದರಲ್ಲೂ ಹಗರಣ ಮಾಡಲಾಗಿದೆ. ನಂತರ, ಎಲ್ಲರನ್ನೂ ಮೈದಾನದ ಒಳಗೆ ತಂದು, ಮೆಸ್ಸಿಯನ್ನು ಹೊರಗಡೆ ಕರೆದುಕೊಂಡು ಹೋಗಲಾಗಿದೆ. ಸಾಮಾನ್ಯ ಜನರು ಕಷ್ಟಪಟ್ಟು ಗಳಿಸಿದ ಹಣವು ಉಳ್ಳವರ ಪಾಲಾಗಿದೆ ಎಂದು ಕಿಡಿಕಾರಿದೆ.
ಉದ್ರಿಕ್ತ ಅಭಿಮಾನಿಗಳು ಮೈದಾನದೊಳಗೆ ನುಗ್ಗಿ, ದಾಂಧಲೆ ಮಾಡುತ್ತಿರುವ ಹಾಗೂ ಪೊಲೀಸರು ಲಾಠಿಚಾರ್ಜ್ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.