
ಬೆಂಗಳೂರು ಎಫ್‌ಸಿ ತಂಡದ ವಿರುದ್ಧ ಪಂಜಾಬ್ ಎಫ್‌ಸಿ ತಂಡದ ಎಫಿಯಾಂಗ್ (ಎಡ) ಗೋಲು ದಾಖಲಿಸಲು ಯತ್ನಿಸಿದರು
ಚಿತ್ರ: ವಿ.ಪುಷ್ಕರ್
ಬೆಂಗಳೂರು: ನೈಜೀರಿಯಾದ ಮುಂಚೂಣಿ ಆಟಗಾರ ಎಫಿಯಾಂಗ್ ಅವರ ಅಮೋಘ ಆಟದ ನೆರವಿನಿಂದ ಪಂಜಾಬ್ ಎಫ್‌ಸಿ ತಂಡವು ಶುಕ್ರವಾರ ನಡೆದ ಇಂಡಿಯನ್ ಸೂಪರ್ ಲೀಗ್‌ನ ಪಂದ್ಯದಲ್ಲಿ 2–0 ಗೋಲುಗಳಿಂದ ಆತಿಥೇಯ ಬೆಂಗಳೂರು ಎಫ್‌ಸಿ ತಂಡವನ್ನು ಮಣಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಫಿಯಾಂಗ್ 20ನೇ ಮತ್ತು 32ನೇ ನಿಮಿಷದಲ್ಲಿ ಗೋಲು ದಾಖಲಿಸಿ, ಪಂಜಾಬ್ ತಂಡದ ಗೆಲುವಿನ ರೂವಾರಿಯಾದರು. ಇದರೊಂದಿಗೆ ಪಂಜಾಬ್ ಹಾಲಿ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಿತು. ತನ್ನ ಮೊದಲ ಪಂದ್ಯದಲ್ಲಿ ಜೆಮ್ಶೆಡ್‌ಪುರ ತಂಡಕ್ಕೆ ಸೋತಿತ್ತು.
ಈ ಸೋಲಿನೊಂದಿಗೆ ಸುನಿಲ್ ಚೆಟ್ರಿ ಬಳಗದ ಅಜೇಯ ಓಟಕ್ಕೂ ತೆರೆಬಿತ್ತು. ಸ್ಪೋರ್ಟಿಂಗ್ ಡೆಲ್ಲಿ ತಂಡವನ್ನು ಮಣಿಸಿ ಅಭಿಯಾನ ಆರಂಭಿಸಿದ ಬಿಎಫ್‌ಸಿ ತಂಡವು ತನ್ನ ಎರಡನೇ ಪಂದ್ಯದಲ್ಲಿ ನಾರ್ಟ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಡ್ರಾ ಸಾಧಿಸಿತ್ತು. ಲೀಗ್ ಪಟ್ಟಿಯಲ್ಲಿ ಬಿಎಫ್‌ಸಿ (4 ಅಂಕ) ಆರನೇ
ಸ್ಥಾನದಲ್ಲಿದ್ದರೆ, ಪಂಜಾಬ್ (3 ಅಂಕ) ಏಳನೇ ಸ್ಥಾನಕ್ಕೇರಿತು.
ಬೆಂಗಳೂರು ಎಫ್‌ಸಿ ತಂಡವು ಮಾರ್ಚ್ 7ರಂದು ಕೋಲ್ಕತ್ತದಲ್ಲಿ ಮೊಹಮ್ಮಡನ್ ಎಫ್‌ಸಿ ತಂಡವನ್ನು ಎದುರಿಸಲಿದೆ.
ಅಜೇಯ ಓಟವನ್ನು ಮುಂದುವರಿಸಿದ ಜಮ್ಯೆಡ್‌ಪುರ ಎಫ್‌ಸಿ ತಂಡವು 2–1 ಗೋಲುಗಳಿಂದ ಬಲಿಷ್ಠ ಈಸ್ಟ್ ಬೆಂಗಾಲ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿತು.
ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಮ್ಯೆಡ್‌ಪುರ ಪರ ಸ್ಟೀಫನ್ ಈಜ್ (61ನೇ) ಮತ್ತು ರೇಯ್ ತಚಿಕಾವಾ (87ನೇ) ಅವರು ತಲಾ ಒಂದು ಗೋಲು ದಾಖಲಿಸಿದರು. ಬೆಂಗಾಲ್ ಪರ ಎಡ್ಮಂಡ್ ಲಾಲ್ರಿಂಡಿಕಾ (40ನೇ) ಏಕೈಕ ಗೋಲು ತಂದಿತ್ತರು. ಸತತ ಮೂರು ಪಂದ್ಯಗಳನ್ನು ಗೆದ್ದ ಜಮ್ಯೆಡ್‌ಪುರ 9 ಅಂಕಗಳೊಂದಿಗೆ ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.