ADVERTISEMENT

ಫುಟ್‌ಬಾಲ್‌: ಭಾಗೀದಾರರ ಜೊತೆ ಸಚಿವ ಮಾಂಡವೀಯ ಸಭೆ ನಾಳೆ

ಪಿಟಿಐ
Published 2 ಡಿಸೆಂಬರ್ 2025, 0:19 IST
Last Updated 2 ಡಿಸೆಂಬರ್ 2025, 0:19 IST
<div class="paragraphs"><p>ಮನ್ಸುಖ್ ಮಾಂಡವೀಯ</p></div>

ಮನ್ಸುಖ್ ಮಾಂಡವೀಯ

   

ನವದೆಹಲಿ: ಭಾರತ ಫುಟ್‌ಬಾಲ್‌ ಈಗ ಎದುರಿಸುತ್ತಿರುವ ಬಿಕ್ಕಟ್ಟಿಗೆ ಪರಿಹಾರದ ಮಾರ್ಗ ಕಂಡುಕೊಳ್ಳಲು, ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು, ಸಂಬಂಧಪಟ್ಟ ಎಲ್ಲ ಭಾಗೀದಾರರ ಸಭೆಯನ್ನು ಇದೇ 3ರಂದು ಕರೆದಿದ್ದಾರೆ.

ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌), ಅದರ ಮಾಜಿ ವಾಣಿಜ್ಯ ಪಾಲುದಾರ, ಐಎಸ್‌ಎಲ್‌ ಕ್ಲಬ್‌ಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ಮೊದಲ ಸ್ತರದ ಇಂಡಿಯನ್ ಸೂಪರ್ ಲೀಗ್ ಸೇರಿದಂತೆ ದೇಶಿ ಲೀಗ್‌ಗಳನ್ನು ನಡೆಸಲು ಎಐಎಫ್‌ಎಫ್‌ಗೆ ವಾಣಿಜ್ಯ ಪಾಲುದಾರ ಸಿಗದಿರುವುದು ಬಿಕ್ಕಟ್ಟು ಬಿಗಡಾಯಿಸಿದೆ. 

‘ಪರಿಹಾರವೊಂದನ್ನು ಕಂಡುಕೊಳ್ಳುವಂತೆ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಇದು ತಾನು ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿರಬೇಕೆಂದೂ ಹೇಳಿದೆ. ಭಾರತದ ಫುಟ್‌ಬಾಲ್‌ನ ಪ್ರತಿನಿಧಿಗಳ ಜೊತೆ ಇದು ದಿನವಿಡೀ ನಡೆಯುವ ಸರಣಿ ಸಭೆಗಳಾಗಲಿವೆ. ಅವರು ತಮ್ಮ ಕಳವಳದ ಬಗ್ಗೆ ಹೇಳಿಕೊಳ್ಳಬಹುದು. ಸಚಿವರು ಅದಕ್ಕೆ ಸಲಹೆಗಳನ್ನು ನೀಡಬಹುದು’ ಎಂದು ಸಚಿವಾಲಯದ ಮೂಲವೊಂದು ಪಿಟಿಐಗೆ ತಿಳಿಸಿದೆ.

15 ವರ್ಷಗಳ ಮಾಸ್ಟರ್‌ ರೈಟ್ಸ್‌ ಒಪ್ಪಂದ (ಎಂಆರ್‌ಎ)ಕ್ಕೆ ಸಂಬಂಧಿಸಿ ಸ್ಪಷ್ಟತೆಯಿಲ್ಲದ ಕಾರಣ ತಾನು ಐಎಸ್‌ಎಲ್‌ ಆಯೋಜನೆ ತಡೆಹಿಡಿಯುವುದಾಗಿ ಅದನ್ನು ನಿರ್ವಹಿಸುತ್ತಿದ್ದ ಫೆಡರೇಷನ್‌ನ ವಾಣಿಜ್ಯ ಪಾಲುದಾರ ಫುಟ್‌ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ (ಎಫ್‌ಎಸ್‌ಡಿಎಲ್‌) ಜುಲೈನಲ್ಲಿ ಫೆಡರೇಷನ್‌ಗೆ ತಿಳಿಸಿದ್ದರಿಂದ ಬಿಕ್ಕಟ್ಟು ಕಾಣಿಸಿಕೊಂಡಿತ್ತು. ಎಫ್‌ಎಸ್‌ಡಿಎಲ್‌ ಜೊತೆಗಿನ ಒಪ್ಪಂದದ ಅವಧಿ ಇದೇ 8ರಂದು ಕೊನಗೊಳ್ಳಲಿದೆ.

ನಂತರ ಹಲವು ಸಮಸ್ಯೆಗಳನ್ನು ಫೆಡರೇಷನ್ ಎದುರಿಸಿದೆ. ಇದರ ನಡುವೆ, ಮಾಜಿ ನ್ಯಾಯಮೂರ್ತಿ ಎಲ್‌.ನಾಗೇಶ್ವರ ರಾವ್ ಅವರ ಉಸ್ತುವಾರಿಯಲ್ಲಿ ರೂಪಿಸಿದ ಎಐಎಫ್‌ಎಫ್‌ ನಿಯಮಾವಳಿಗೆ ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿರುವುದು ಬೆಳ್ಳಿಗೆರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.