
ಮುಂಬೈ: ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ‘ದ ಮೆಸ್ಸಿ ಎಕ್ಸ್‌ಪೀರಿಯನ್ಸ್ - ಎ ಡ್ರೀಮ್ ಕಮ್ ಟ್ರೂ’ ಈ ಮಾರ್ಚ್‌ನಲ್ಲಿ ಭಾರತಕ್ಕೆ ಬರುತ್ತಿದೆ. 2026ರ ವಿಶ್ವ ಪ್ರವಾಸದ ಅತ್ಯಂತ ನಿರೀಕ್ಷಿತ ಕಾರ್ಯಕ್ರಮಗಳಲ್ಲಿ ಒಂದಾದ ಈ ವಿಶಿಷ್ಟ ಪ್ರದರ್ಶನವು ಫುಟ್‌ಬಾಲ್ ಅಭಿಮಾನಿಗಳಿಗೆ ಹಬ್ಬವಾಗಲಿದ್ದು, ಭಾರತದ ಪ್ರಮುಖ ಮನರಂಜನಾ ಸಂಸ್ಥೆಯಾದ ಬುಕ್‌ಮೈಶೋ ಲೈವ್ ಇದನ್ನು ಆಯೋಜಿಸುತ್ತಿದೆ.
ಈ ಅದ್ಭುತ ಪ್ರದರ್ಶನವು 2026ರ ಮಾರ್ಚ್ 20ರಂದು ಮುಂಬೈನ ಸೆಂಚುರಿ ಮಿಲ್ಸ್ (ಲೋವರ್ ಪರೇಲ್)ನಲ್ಲಿ ಪ್ರಾರಂಭವಾಗಲಿದೆ ಮತ್ತು ಜೂನ್ 19, 2026 ರಂದು ಬೆಂಗಳೂರಿನ ಭಾರತೀಯ ಸಿಟಿ ಮಾಲ್‌ಗೆ ಬರಲಿದೆ.
ಈ ಬಗ್ಗೆ ಮಾತನಾಡಿದ ಲಿಯೋ ಮೆಸ್ಸಿ, ‘ಈ ಯೋಜನೆಯು ಸಾಕಾರಗೊಳ್ಳುತ್ತಿರುವುದು ಮತ್ತು ಅಭಿಮಾನಿಗಳನ್ನು ನನ್ನ ಜೀವನದ ಕಥೆಗೆ ಇನ್ನಷ್ಟು ಹತ್ತಿರ ತರುತ್ತಿರುವುದು ನನಗೆ ಖುಷಿ ತಂದಿದೆ. ನನ್ನ ಫುಟ್‌ಬಾಲ್ ಪ್ರೀತಿಯ ಮೂಲಕ ಜನರನ್ನು ಪ್ರೇರೇಪಿಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ. ಈ ಅನುಭವವು ಭಾರತೀಯ ಅಭಿಮಾನಿಗಳಿಗೆ ನನ್ನ ವೃತ್ತಿಜೀವನದ ಮರೆಯಲಾಗದ ಕ್ಷಣಗಳನ್ನು ಪುನಃ ನೆನಪಿಸಿಕೊಳ್ಳಲು ಅವಕಾಶ ನೀಡುತ್ತದೆ,’ ಎಂದಿದ್ದಾರೆ.
ಬುಕ್‌ಮೈಶೋ ಲೈವ್‌ನ ಚೀಫ್ ಬಿಸಿನೆಸ್ ಆಫೀಸರ್ ನಮನ್ ಪುಗಾಲಿಯಾ ಮಾತನಾಡಿ, ‘ಭಾರತದಲ್ಲಿ ಬೆಳೆಯುತ್ತಿರುವ ಫುಟ್‌ಬಾಲ್ ಪ್ರೇಮಕ್ಕೆ ಈ ಪ್ರದರ್ಶನವು ಹೊಸ ಆಯಾಮ ನೀಡಲಿದೆ. ಕ್ರೀಡೆ, ಕಥೆ ಹೇಳುವಿಕೆ ಮತ್ತು ತಂತ್ರಜ್ಞಾನದ ಸಮ್ಮಿಲನವಾಗಿರುವ ಇದು 2026ರ ಅತ್ಯಂತ ಆಕರ್ಷಕ ಸಾಂಸ್ಕೃತಿಕ ಕೇಂದ್ರವಾಗಲಿದೆ,’ ಎಂದಿದ್ದಾರೆ.
ಸುಮಾರು 75 ನಿಮಿಷಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ಅಭಿಮಾನಿಗಳು ಮೆಸ್ಸಿಯ ಬಾಲ್ಯದಿಂದ ಹಿಡಿದು ವಿಶ್ವಕಪ್ ಗೆಲುವಿನವರೆಗಿನ ಹಾದಿಯನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಅನುಭವಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.