ADVERTISEMENT

ಇಂಡಿಯನ್ ಸೂಪರ್ ಲೀಗ್: ಅಗ್ರ ನಾಲ್ಕರ ಮೇಲೆ ಚೆನ್ನೈಯಿನ್ ಕಣ್ಣು

ಇಂದು ನಾರ್ತ್ ಈಸ್ಟ್ ಯುನೈಟೆಡ್ ಎದುರಾಳಿ

ಪಿಟಿಐ
Published 21 ಜನವರಿ 2022, 13:59 IST
Last Updated 21 ಜನವರಿ 2022, 13:59 IST
ನಾರ್ತ್‌ ಈಸ್ಟ್ ಯುನೈಟೆಡ್‌ ತಂಡದ ಸುಹೇರ್‌ ಅಭ್ಯಾಸದಲ್ಲಿ ತೊಡಗಿದ್ದ ಸಂದರ್ಭ –ಐಎಸ್‌ಎಲ್‌ ಚಿತ್ರ
ನಾರ್ತ್‌ ಈಸ್ಟ್ ಯುನೈಟೆಡ್‌ ತಂಡದ ಸುಹೇರ್‌ ಅಭ್ಯಾಸದಲ್ಲಿ ತೊಡಗಿದ್ದ ಸಂದರ್ಭ –ಐಎಸ್‌ಎಲ್‌ ಚಿತ್ರ   

ಫತೋರ್ಡ, ಗೋವಾ: ಲಯ ಕಳೆದುಕೊಂಡಿರುವ ನಾರ್ತ್ ಈಸ್ಟ್ ಯುನೈಟೆಡ್‌ ವಿರುದ್ಧ ಶನಿವಾರ ಸೆಣಸಲಿರುವ ಚೆನ್ನೈಯಿನ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಅಗ್ರ ನಾಲ್ಕು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಎರಡು ಪಂದ್ಯಗಳಲ್ಲಿ ಜಯ ಕಾಣದೇ ಇರುವ ತಂಡಕ್ಕೆ ಲಯಕ್ಕೆ ಮರಳುವುದಕ್ಕೂ ಇದು ಉತ್ತಮ ಅವಕಾಶವಾಗಲಿದೆ.

11 ಪಂದ್ಯಗಳನ್ನು ಆಡಿರುವ ಚೆನ್ನೈಯಿನ್‌ ಒಟ್ಟು 15 ಪಾಯಿಂಟ್‌ಗಳನ್ನು ಕಲೆ ಹಾಕಿದ್ದು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಎಟಿಕೆ ಮೋಹನ್ ಬಾಗನ್ ಕೂಡ 15 ಪಾಯಿಂಟ್‌ ಗಳಿಸಿದೆ. ಆದರೆ ಕೋವಿಡ್ ಕಾರಣದಿಂದಾಗಿ ತಂಡಕ್ಕೆ ಹಿಂದಿನ ಮೂರು ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ.

ಶನಿವಾರ ಜಯ ಗಳಿಸಿದರೆ ಚೆನ್ನೈಯಿನ್‌ ಮೂರನೇ ಸ್ಥಾನಕ್ಕೆ ಜಿಗಿಯಲಿದೆ. ಶುಕ್ರವಾರ ನಡೆಯಬೇಕಾಗಿದ್ದ ಜೆಮ್ಶೆಡ್‌ಪುರ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ನಡುವಿನ ಪಂದ್ಯ ಮುಂದೂಡಿರುವುದರಿಂದ ಚೆನ್ನೈಯಿನ್‌ಗೆ ಈ ಅವಕಾಶ ಒದಗಿದೆ. ಜೆಮ್ಶೆಡ್‌ಪುರ ಸದ್ಯ ಎರಡನೇ ಸ್ಥಾನದಲ್ಲಿದ್ದು ಮುಂಬೈ ಸಿಟಿ ನಾಲ್ಕನೇ ಸ್ಥಾನದಲ್ಲಿದೆ.

ADVERTISEMENT

ಚೆನ್ನೈಯಿನ್ ತಂಡ ಈ ಬಾರಿ ಮಿಶ್ರ ಫಲ ಕಂಡಿದೆ. ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿರುವ ಅನಿರುದ್ಧ ತಾಪಾ ಬಳಗ ಆಕ್ರಮಣದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಅನಿರುದ್ಧ ಈ ವರೆಗೆ ಅಮೋಘ ಆಟವಾಡಿದ್ದಾರೆ. ಒಟ್ಟು 10 ಅಸಿಸ್ಟ್‌ಗಳೊಂದಿಗೆ ಮಿಂಚಿದ್ದಾರೆ. ಅವಕಾಶಗಳನ್ನು ಸೃಷ್ಟಿಸಲು ವಿಫಲವಾಗುತ್ತಿರುವ ಮಿಡ್‌ಫೀಲ್ಡ್‌ ವಿಭಾಗಕ್ಕೆ ಬಲ ತುಂಬಲು ಕೋಚ್‌ ಬೋಜಿದರ್‌ ಬಾಂಡೊವಿಚ್‌ ಪ್ರಯತ್ನಿಸುತ್ತಿದ್ದಾರೆ. ‌

ಎಸ್‌ಸಿ ಈಸ್ಟ್ ಬೆಂಗಾಲ್ ಕಳೆದ ಪಂದ್ಯದಲ್ಲಿ ಈ ಋತುವಿನ ಮೊದಲ ಜಯ ದಾಖಲಿಸಿ ನಾರ್ತ್ ಈಸ್ಟ್ ಯುನೈಟೆಡ್‌ ತಂಡವನ್ನು ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನಕ್ಕೆ ತಳ್ಳಿದೆ. ಖಲೀದ್‌ ಜಮೀಲ್‌ ಕೋಚ್ ಆಗಿರುವ ನಾರ್ತ್ ಈಸ್ಟ್ ಯುನೈಟೆಡ್ ಹಿಂದಿನ ಐದು ಪಂದ್ಯಗಳಲ್ಲಿ ಗೆಲುವು ಕಾಣಲಿಲ್ಲ. ಆದ್ದರಿಂದ ಲಯಕ್ಕೆ ಮರಳಲು ಶನಿವಾರ ಪ್ರಯತ್ನಿಸಲಿದೆ. ಹಿಂದಿನ ಬಾರಿ ಮುಖಾಮುಖಿಯಾದಾಗ ಚೆನ್ನೈಯಿನ್ 2–1ರಲ್ಲಿ ನಾರ್ತ್ ಈಸ್ಟ್ ವಿರುದ್ಧ ಜಯ ಗಳಿಸಿತ್ತು.

ಮುಂಬೈ ಸಿಟಿಗೆ ಬ್ರೆಜಿಲ್‌ನ ಮೌರಿಸಿಯೊ

ಮುಂಬೈ: ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ ತಂಡ ಬ್ರೆಜಿಲ್‌ನ ಫಾರ್ವರ್ಡ್ ಆಟಗಾರ ಡಿಯೆಗೊ ಮೌರಿಸಿಯೊ ಜೊತೆ ಶುಕ್ರವಾರ ಒಪ್ಪಂದ ಮಾಡಿಕೊಂಡಿದೆ. 30 ವರ್ಷದ ಮೌರಿಸಿಯೊ ಸಣ್ಣ ಅವಧಿಗೆ ತಂಡದೊಂದಿಗೆ ಇರುವರು. ಒಪ್ಪಂದವು ಮೇ 31ಕ್ಕೆ ಮುಕ್ತಾಯಗೊಳ್ಳಲಿದೆ.

ಬ್ರೆಜಿಲ್‌ನ ಪ್ರಸಿದ್ಧ ಅಕಾಡೆಮಿಯಾದ ಫ್ಲೆಮಿಂಗೊದಲ್ಲಿ 2006ರಲ್ಲಿ ಫುಟ್‌ಬಾಲ್ ಆಡಲು ಆರಂಭಿಸಿದ ಮೌರಿಸಿಯೊ ನಂತರ ವೃತ್ತಿಪರ ಕಣಕ್ಕೆ ಇಳಿದಿದ್ದರು. ಬ್ರೆಜಿಲ್‌ನ ಸ್ಪೋರ್ಟ್‌ ರಿಸೈಪ್‌ ಆ್ಯಂಡ್ ರೆಡ್ ಬುಲ್ ಬ್ರಗಾಂಟಿನೊ, ರಷ್ಯಾದ ಎಫ್‌ಸಿ ಸ್ಪಾರ್ತಕ್‌, ಪೋರ್ಚುಗಲ್‌ನ ವಿಟೋರಿಯಾ ಎಫ್‌ಸಿ, ಸೌದಿ ಅರೆಬಿಯಾದ ಅಲ್‌ ಕ್ವಾದಿಸಿಯಾ, ಚೀನಾದ ಕಾಂಗ್ಜು ಮೈಟಿ ಲಯನ್ಸ್‌ ಮತ್ತು ದಕ್ಷಿಣ ಕೊರಿಯಾದ ಗಾಂಗ್ವಾನ್ ಎಫ್‌ಸಿ ಹಾಗೂ ಬುಸಾನ್ ಐಪರ್ಕ್‌ ತಂಡಗಳಲ್ಲಿ ಆಡಿದ ಅವರು 2020ರಲ್ಲಿ ತವರಿಗೆ ವಾಪಸಾಗಿ ಸ್ಪೋರ್ಟಿವೊ ಅಲಗಾನೊ ತಂಡದಲ್ಲಿದ್ದರು. ಕಳೆದ ಋತುವಿನಲ್ಲಿ ಒಡಿಶಾ ಎಫ್‌ಸಿ ಸೇರಿ ಐಎಸ್‌ಎಲ್‌ನಲ್ಲಿ ಆಡಿದ್ದರು.

***

ಮುಂಬೈ ಸಿಟಿ ಎಫ್‌ಸಿಯಂಥ ತಂಡದಲ್ಲಿ ಆಡುವುದೆಂದರೆ ಅಭಿಮಾನದ ವಿಷಯ. ಹೊಸ ಸವಾಲಿಗೆ ಸಜ್ಜಾಗಿದ್ದು ಆದಷ್ಟು ಬೇಗ ಕಣಕ್ಕೆ ಇಳಿಯಲು ಕಾತರನಾಗಿದ್ದೇನೆ.

ಡಿಯೆಗೊ ಮೌರಿಸಿಯೊ ಮುಂಬೈ ಸಿಟಿ ಎಫ್‌ಸಿ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.