ADVERTISEMENT

ಒಲಿಂಪಿಕ್‌| ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣನೆ: ರಷ್ಯಾಗೆ ನಾಲ್ಕು ವರ್ಷ ನಿಷೇಧ

ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣನೆ

ಏಜೆನ್ಸೀಸ್
Published 9 ಡಿಸೆಂಬರ್ 2019, 20:00 IST
Last Updated 9 ಡಿಸೆಂಬರ್ 2019, 20:00 IST
   

ಲಾಸೇನ್‌: ಉದ್ದೀಪನ ಮದ್ದು ಸೇವನೆ ನಿಯಮಗಳನ್ನು ನಿರ್ಲಕ್ಷಿಸಿದ ರಷ್ಯಾ ಮೇಲೆ ನಾಲ್ಕು ವರ್ಷಗಳ ಒಲಿಂಪಿಕ್‌ ನಿಷೇಧ ಹೇರಲಾಗಿದೆ.

ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿಯ (ವಾಡಾ) ಕಾರ್ಯಕಾರಿ ಸಮಿತಿ ಸೋಮವಾರ ಈ ನಿರ್ಧಾರ ಕೈಗೊಂಡಿದೆ. 2020ರ ಟೋಕಿಯೊ ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ರಷ್ಯಾದ ಧ್ವಜದಡಿ ಅಥ್ಲೀಟುಗಳು ಸ್ಪರ್ಧಿಸುವಂತಿಲ್ಲ.

ಮಾಸ್ಕೊ ಪ್ರಯೋಗಾಲಯದಲ್ಲಿ ಮದ್ದು ಸೇವನೆಗೆ ಸಂಬಂಧಿಸಿದ ವರದಿಗಳನ್ನು ತಿರುಚಿದ್ದಕ್ಕೆ ಶಿಕ್ಷೆಯಾಗಿ ನಿಷೇಧದ ಕುರಿತ ಎಲ್ಲ ಶಿಫಾರಸುಗಳಿಗೆ ವಾಡಾ ಕಾರ್ಯಕಾರಿ ಸಮಿತಿ ಸಮ್ಮತಿ ಸೂಚಿಸಿದೆ.ರಷ್ಯಾ ಒಲಿಂಪಿಕ್‌ ಕ್ರೀಡೆಗಳ ವಿಶ್ವ ಚಾಂಪಿಯನ್‌ಷಿಪ್‌ ಆತಿಥ್ಯ ವಹಿಸುವುದನ್ನೂ ನಿರ್ಬಂಧಿಸಲಾಗಿದೆ.

ADVERTISEMENT

ವಾಡಾ ನಿಯಮದ ಅನ್ವಯ ರಷ್ಯಾದ ಕಳಂಕವಿಲ್ಲದ ಕ್ರೀಡಾಪಟುಗಳು ಪ್ರಮುಖ ಟೂರ್ನಿಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ.

ಉದ್ದೀಪನ ಮದ್ದು ಸೇವನೆ ತಡೆ ಏಜೆನ್ಸಿ (ವಾಡಾ) ಈ ನಿರ್ಧಾರವನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು 21 ದಿನಗಳ ಕಾಲಾವಕಾಶ ರಷ್ಯಾಗೆ ಇದೆ.

ವಾಡಾದ ಈ ಕಾನೂನು ವ್ಯಾಜ್ಯವು ಜುಲೈ 24ರಿಂದ ಆರಂವಾಗುವ ಟೋಕಿಯೊ ಒಲಿಂಪಿಕ್‌ ಸಿದ್ಧತೆಗಳ ಮೇಲೆ ಪರಿಣಾಮ ಬೀರುವ ಸಂಭವವಿದೆ.

‘ರಷ್ಯಾ ಅಧಿಕಾರಿಗಳು ಸಂಭಾವ್ಯ ಡೋಪಿಂಗ್‌ ಕುರಿತು ಪ್ರಯೋಗಾಲಯದ ನೂರಾರು ವರದಿಗಳನ್ನು ಮುಚ್ಚಿಟ್ಟಿದ್ದಕ್ಕೆ ಮತ್ತು ರಹಸ್ಯ ಭೇದಿಸಿದ ವ್ಯಕ್ತಿಗಳ ಮೇಲೆಯೇಈ ಆರೋಪವನ್ನು ಹೊರಿಸಲು ಪ್ರಯತ್ನಿಸಿದ ಬಗ್ಗೆ ಸಾಕ್ಷ್ಯ ದೊರೆತಿದೆ’ ಎಂದು ವಾಡಾದ ತನಿಖಾಧಿಕಾರಿಗಳು ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು ಕಳೆದ ತಿಂಗಳು ಹೇಳಿತ್ತು.

‘ಇದು ವಿಶ್ವ ಕಂಡ ಅತಿ ದೊಡ್ಡ ಕ್ರೀಡಾ ಹಗರಣ. ಅಥ್ಲೀಟುಗಳು ಹಾಗೂ ಕ್ರೀಡಾ ಅಭಿಮಾನಿಗಳು ಅನುಭವಿಸಿದ ನೋವಿಗೆ ರಷ್ಯಾ ಕ್ಷಮೆ ಕೇಳಬೇಕು’ ಎಂದು ವಾಡಾ ಕಾರ್ಯನಿರ್ವಹಣಾಧಿಕಾರಿ ಲಿಂಡಾ ಹೆಲೆಲ್ಯಾಂಡ್‌ ಹೇಳಿದ್ದಾರೆ.

ಈ ನಿರೀಕ್ಷಿತ ನಿಷೇಧವನ್ನು ಶನಿವಾರ, ರಷ್ಯಾ ಒಲಿಂಪಿಕ್‌ ಸಮಿತಿಯು ‘ಅತಾರ್ಕಿಕ ಹಾಗೂ ಸೂಕ್ತವಲ್ಲದ್ದು’ ಎಂದು ಹೇಳಿತ್ತು.

ಡೋಪಿಂಗ್‌ ನಿಷೇಧದ ಮೇಲ್ಮನವಿ ಸಲ್ಲಿಸಿ ಕೋರ್ಟ್‌ನಲ್ಲಿ ಗೆಲ್ಲುವ ವಿಶ್ವಾಸವಿಲ್ಲ ಎಂದು ರಷ್ಯಾದ ಉದ್ದೀಪನ ಮದ್ದು ಸೇವನೆ ಎಜನ್ಸಿ ಹೇಳಿದೆ. ಕಳಂಕರಹಿತ ಅಥ್ಲೀಟುಗಳಿಗೆ ಈ ನಿಷೇಧ ದುಃಖದ ಸಂಗತಿ ಎಂದು ಎಜನ್ಸಿ ಮುಖ್ಯಸ್ಥ ಯೂರಿ ಗ್ಯಾನಸ್‌ ಹೇಳಿದ್ದಾರೆ.

ನಿರ್ಬಂಧಅತಿಯಾದುದು’

ಮಾಸ್ಕೊ: ರಷ್ಯ ವಿರುದ್ಧ ‘ವಾಡಾ’ ಹೇರಿದನಿರ್ಬಂಧಅತಿಯಾದುದುಮತ್ತು ಅನುಚಿತ ರೀತಿಯಲ್ಲಿದೆ ಎಂದು ರಷ್ಯ ಒಲಿಂಪಿಕ್‌ ಸಮಿತಿ ಅಧ್ಯಕ್ಷ ಸ್ಟಾನಿಸ್ಲಾವ್‌ ಪೊಜ್ನಡಿಕೋವ್‌ ಪ್ರತಿಕ್ರಿಯಿಸಿದ್ದಾರೆ.

‘ಈ ರೀತಿಯನಿರ್ಬಂಧಅತಾರ್ಕಿಕವಾದುದು ಮತ್ತು ಅನುಚಿತವಾದುದು. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಅವರು ತಿಳಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.