ಅರ್ಜುನ್ ಇರಿಗೇಶಿ
-ಎಕ್ಸ್ ಚಿತ್ರ
ಮಾಲ್ಮೊ (ಸ್ವೀಡನ್): ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಶುಕ್ರವಾರ ಮುಕ್ತಾಯಗೊಂಡ ಟೇಪೆ ಸಿಗೆಮನ್ ಅಂಡ್ ಕೊ ಚೆಸ್ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದರು. ಅಗ್ರಸ್ಥಾನ ಹಂಚಿಕೊಂಡ ಮೂವರು ಆಟಗಾರರ ನಡುವೆ ಟೈಬ್ರೇಕರ್ ಪಂದ್ಯಗಳು ನಡೆದು, ಅಂತಿಮವಾಗಿ ಉಜ್ಬೇಕಿಸ್ತಾನದ ಆಟಗಾರ ನಾಡಿರ್ಬೆಕ್ ಅಬ್ದುಸತ್ತಾರೋವ್ ಚಾಂಪಿಯನ್ ಆದರು.
ಏಳನೇ ಸುತ್ತಿನ ನಂತರ ರಷ್ಯಾದ ಪೀಟರ್ ಸ್ವಿಡ್ಲರ್, ಅರ್ಜುನ್ ಇರಿಗೇಶಿ ಮತ್ತು ಅಬ್ದುಸತ್ತಾರೋವ್ ತಲಾ 4.5 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿದ್ದರು. ವಿಜೇತರನ್ನು ನಿರ್ಧರಿಸಲು ಮೂವರ ನಡುವೆ ಟೈಬ್ರೇಕ್ ಪಂದ್ಯಗಳು ನಡೆದವು. ಟೈಬ್ರೇಕರ್‌ನಲ್ಲಿ ಸ್ವಿಡ್ಲರ್ ಎರಡೂ ಪಂದ್ಯಗಳಲ್ಲಿ (ಅರ್ಜುನ್ ಮತ್ತು ಅಬ್ದುಸತ್ತಾರೋವ್ ವಿರುದ್ಧ) ಸೋಲನುಭವಿಸಿದರು. ಅರ್ಜುನ್– ಅಬ್ದುಸತ್ತಾರೋವ್ ನಡುವಣ ಪಂದ್ಯ ಡ್ರಾ ಆಯಿತು.
ಫೈನಲ್ ಟೈಬ್ರೇಕ್ ಆಡಿದ ಅಬ್ದುಸತ್ತಾರೋವ್ 1.5–0.5 ರಿಂದ ಅರ್ಜುನ್ ಅವರನ್ನು ಮಣಿಸಿದರು. ಆದರೆ ಬಹುಮಾನ ಹಣವನ್ನು ಮೂವರಿಗೆ ಸಮಾನವಾಗಿ ಹಂಚಲಾಯಿತು.
ಇದಕ್ಕೆ ಮೊದಲು ನಡೆದ ಏಳನೇ ಸುತ್ತಿನ ಪಂದ್ಯಗಳಲ್ಲಿ ಅಬ್ದುಸತ್ತಾರೋವ್, ಫ್ರಾನ್ಸ್‌ನ ಮಾರ್ಕ್ ಆಂಡ್ರಿಯಾ ಮೌರಿಝಿ (1.5) ಅವರನ್ನು ಸೋಲಿಸಿದರೆ, ಸ್ವಿಡ್ಲರ್ ಮತ್ತು ಜರ್ಮನಿಯ ವಿನ್ಸೆಂಟ್ ಕೀಮರ್ (3.5) ನಡುವಣ ಪಂದ್ಯ ‘ಡ್ರಾ’ ಆಯಿತು. ಇರಿಗೇಶಿ ಮತ್ತು ಆತಿಥೇಯ ಸ್ವೀಡನ್‌ನ ನಿಲ್ಸ್ ಗ್ರಾಂಡೇನಿಯಸ್ (2) ನಡುವಣ ಪಂದ್ಯವೂ ಅದೇ ಹಾದಿ ಹಿಡಿಯಿತು. ಕಣದಲ್ಲಿದ್ದ ಏಕೈಕ ಆಟಗಾರ್ತಿ, ಚೀನಾದ ಜು ವೆನ್‌ಜುನ್ (3.5) ಅವರು ಉಕ್ರೇನಿನ ಆ್ಯಂಟನ್ ಕೊರೊಬೊವ್ (4) ವಿರುದ್ಧ ಜಯಗಳಿಸಿದರು.
ವಿವಿಧ ದೇಶಗಳ ಎಂಟು ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.