ADVERTISEMENT

CWG 2022| ಟೇಬಲ್‌ ಟೆನಿಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಶರತ್‌ಗೆ ಚಿನ್ನ 

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 2:50 IST
Last Updated 9 ಆಗಸ್ಟ್ 2022, 2:50 IST
ಶರತ್ ಕಮಲ್ ಅಚಂತ
ಶರತ್ ಕಮಲ್ ಅಚಂತ   

ಬರ್ಮಿಂಗ್‌ಹ್ಯಾಮ್ : ವಯಸ್ಸು ತನ್ನ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ಸಾಬೀತುಪಡಿಸಿದ ಟೇಬಲ್ ಟೆನಿಸ್‌ ಆಟಗಾರ ಅಚಂತಾ ಶರತ್‌ ಕಮಲ್‌, ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನದ ನಗು ಬೀರಿದರು.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅವರು 11-13, 11-7, 11-2, 11-6, 11-8 ರಲ್ಲಿ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಮಣಿಸಿದರು.

40 ವರ್ಷದ ಶರತ್‌, 16 ವರ್ಷಗಳ ಬಿಡುವಿನ ಬಳಿಕ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. 2006ರ ಮೆಲ್ಬರ್ನ್‌ ಕೂಟದಲ್ಲೂ ಅವರು ಚಿನ್ನ ಜಯಿಸಿದ್ದರು.

ADVERTISEMENT

ಈ ಕೂಟದಲ್ಲಿ ಅವರು ಒಟ್ಟಾರೆ ಮೂರು ಚಿನ್ನ ಗೆದ್ದ ಸಾಧನೆ ಮಾಡಿದರು. ಮಿಶ್ರ ಡಬಲ್ಸ್‌ ಮತ್ತು ತಂಡ ವಿಭಾಗದಲ್ಲೂ ಅವರಿಗೆ ಚಿನ್ನ ಲಭಿಸಿತ್ತು. ಇದರೊಂದಿಗೆ ಕಾಮನ್‌ವೆಲ್ತ್‌ ಕೂಟಗಳಲ್ಲಿ ತಮ್ಮ ಪದಕಗಳ ಸಂಖ್ಯೆಯನ್ನು ಅವರು 13ಕ್ಕೆ ಹೆಚ್ಚಿಸಿಕೊಂಡರು.

ಫೈನಲ್‌ ಪಂದ್ಯದಲ್ಲಿ ಮೊದಲ ಗೇಮ್‌ ಕಳೆದುಕೊಂಡ ಶರತ್, ಆ ಬಳಿಕ ಲಯ ಕಂಡುಕೊಂಡು ಶಿಸ್ತಿನ ಆಟವಾಡಿದರು. ಸತತ ನಾಲ್ಕು ಗೇಮ್‌ ಗೆದ್ದು ಚಿನ್ನ ತಮ್ಮದಾಗಿಸಿಕೊಂಡರು.

ಮಿಶ್ರ ಡಬಲ್ಸ್‌ನಲ್ಲಿ ಸಾಧನೆ: ಶರತ್‌ ಮತ್ತು ಶ್ರೀಜಾ ಅಕುಲಾ ಅವರು ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು. ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಭಾರತದ ಜೋಡಿ 11-4, 9-11, 11-5, 11-6 ರಲ್ಲಿ ಮಲೇಷ್ಯಾದ ಜಾವೆನ್ ಚೂಂಗ್‌– ಕರೆನ್‌ ಲೈನಿ ಅವರನ್ನು ಮಣಿಸಿತು. ಅಕುಲಾ ಅವರಿಗೆ ಕಾಮನ್‌ವೆಲ್ತ್‌ ಕೂಟದ ಮೊದಲ ಪದಕ ಇದು.

ಪುರುಷರ ಡಬಲ್ಸ್‌ನಲ್ಲಿ ಶರತ್‌ ಮತ್ತು ಜಿ.ಸತ್ಯನ್‌ ಜೋಡಿ ಫೈನಲ್‌ನಲ್ಲಿ ಸೋತು ಬೆಳ್ಳಿ ಪಡೆದುಕೊಂಡಿದ್ದರು.

ಸತ್ಯನ್‌ಗೆ ಕಂಚು
ಭಾರತದ ಜಿ.ಸತ್ಯನ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಂಚು ಗೆದ್ದರು. ಮೂರನೇ ಸ್ಥಾನವನ್ನು ನಿರ್ಣಯಿಸಲು ಸೋಮವಾರ ನಡೆದ ಪಂದ್ಯದಲ್ಲಿ ಅವರು 11-9, 11-3, 11-5, 8-11, 9-11, 10-12, 11-9 ರಲ್ಲಿ ಇಂಗ್ಲೆಂಡ್‌ನ ಪಾಲ್‌ ಡ್ರಿಂಕ್‌ಹಾಲ್‌ ಅವರನ್ನು ಮಣಿಸಿದರು.

ಕಾಮನ್‌ವೆಲ್ತ್‌ ಕೂಟದಲ್ಲಿ ಒಟ್ಟಾರೆಯಾಗಿ ಸತ್ಯನ್‌ಗೆ ದೊರೆತ ಆರನೇ ಪದಕ ಇದು. ಸಿಂಗಲ್ಸ್‌ ವಿಭಾಗದಲ್ಲಿ ಅವರಿಗೆ ಲಭಿಸಿದ ಮೊದಲ ಪದಕ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.