ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಭಜರಂಗ್‌, ವಿನೇಶಾ ಮೇಲೆ ಪದಕದ ಭರವಸೆ

ಪಿಟಿಐ
Published 13 ಸೆಪ್ಟೆಂಬರ್ 2019, 20:32 IST
Last Updated 13 ಸೆಪ್ಟೆಂಬರ್ 2019, 20:32 IST
ಬಜರಂಗ್‌ ಪುನಿಯಾ ಅಭ್ಯಾಸದಲ್ಲಿ ನಿರತರಾಗಿರುವುದು
ಬಜರಂಗ್‌ ಪುನಿಯಾ ಅಭ್ಯಾಸದಲ್ಲಿ ನಿರತರಾಗಿರುವುದು   

ನುರ್‌ ಸುಲ್ತಾನ್‌: ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ಕಜಕಸ್ತಾನದ ರಾಜಧಾನಿಯಾಗಿರುವ ಈ ನಗರದಲ್ಲಿ ಶನಿವಾರ ಆರಂಭವಾಗಲಿದೆ. ಭಾರತದ ಕುಸ್ತಿ ಪಟುಗಳು ಇಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ಕಡೆಯೂ ಗಮನಹರಿಸಬೇಕಾಗಿದೆ.

ಭಜರಂಗ್‌ ಪುನಿಯಾ ಮತ್ತು ವಿನೇಶಾ ಪೊಗಟ್‌, ಈ ಕೂಟಕ್ಕೆ ಮೊದಲಿನ ಕೆಲವು ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ದಿವ್ಯಾ ಕಕ್ರಾನ್‌ ಅವರಂಥ ಕೆಲವು ಸ್ಪರ್ಧಿಗಳು ಗಮನಾರ್ಹ ನಿರ್ವಹಣೆ ತೋರುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದಾರೆ.

ಭಜರಂಗ್‌ ಈ ವರ್ಷ ಪಾಲ್ಗೊಂಡ ನಾಲ್ಕೂ ಟೂರ್ನಿಗಳಲ್ಲಿ– ದಾನ್‌ ಕೊಲೊವ್‌, ಏಷ್ಯನ್‌ ಚಾಂಪಿಯನ್‌ಷಿಪ್‌, ಅಲಿ ಅಲಿಯೇವ್ ಆಹ್ವಾನ ಟೂರ್ನಿ ಮತ್ತು ಯಾಸರ್‌ ಡೊಗು ಟೂರ್ನಿಯಲ್ಲಿ ಜಯಶಾಲಿಯಾಗಿದ್ದಾರೆ. ವಿಶ್ವ ಅಗ್ರ ಕ್ರಮಾಂಕದ ಪೈಲ್ವಾನರಾಗಿರುವ ಅವರಿಗೆ 65 ಕೆ.ಜಿ. ವಿಭಾಗದಲ್ಲಿ ಅಗ್ರಶ್ರೇಯಾಂಕ ನೀಡಲಾಗಿದೆ.‌

ADVERTISEMENT

ಈ ವರ್ಷದಿಂದ 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ವಿನೇಶಾ ಪೊಗಟ್‌, ಹೊಸ ತೂಕ ವಿಭಾಗದಲ್ಲಿ ಉತ್ತಮ ಸಾಧನೆ ತೋರುತ್ತ ಬಂದಿದ್ದಾರೆ. ಕಳೆದ ವರ್ಷ 50 ಕೆ.ಜಿ. ವಿಭಾಗದಲ್ಲಿದ್ದರು. ಹೊಂದಿಕೊಳ್ಳಲು ಕೆಲಕಾಲ ತೆಗೆದುಕೊಂಡ ಅವರು ನಂತರ ಐದು ಟೂರ್ನಿಗಳಲ್ಲಿ ಫೈನಲ್‌ ತಲುಪಿದ್ದು, ಮೂರರಲ್ಲಿ (ಯಾಸರ್‌ ಡೊಗು, ಸ್ಪೇನ್‌ ಗ್ಯಾನ್‌ಪ್ರಿ ಮತ್ತು ಪೊಲಿಶ್‌ ಓಪನ್‌) ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಕೌಶಲದಲ್ಲಿ ಕಮ್ಮಿಯಿಲ್ಲದಿದ್ದರೂ, ಪ್ರಬಲ ಎದುರಾಳಿಗಳನ್ನು ಆರು ನಿಮಿಷಗಳ ಸೆಣಸಾಟದಲ್ಲಿ ಮಣಿಸುವುದು ಅವರಿಗೆ ಸವಾಲು. ಇತ್ತೀಚೆಗೆ ಅವರು ಇದನ್ನು ಒಪ್ಪಿಕೊಂಡಿದ್ದಾರೆ ಕೂಡ.

ಗಾಯಾಳಾಗಿದ್ದ ಕಾರಣ ಕಳೆದ ವರ್ಷ ಬುಡಾಪೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಭಾಗವಹಿಸಿರಲಿಲ್ಲ. ಅವರು ಮಹಿಳಾ ವಿಭಾಗದ ಪದಕದ ಬರವನ್ನು ನೀಗಿಸುವರೇ ಎಂಬುದು ಕುತೂಹಲಕ್ಕೆ ದಾರಿಮಾಡಿಕೊಟ್ಟಿದೆ.

ಪುರುಷರ ವಿಭಾಗದಲ್ಲಿ ಸುಶೀಲ್‌ ಕುಮಾರ್‌ ಏಕೈಕ ಪದಕವನ್ನು ಫ್ರೀಸ್ಟೈಲ್‌ನಲ್ಲಿ ಗೆದ್ದುಕೊಂಡಿದ್ದಾರೆ. ಎರಡು ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಗೆದ್ದಿರುವ ಸುಶೀಲ್‌, ಇತ್ತೀಚಿನ ದಿನಗಳಲ್ಲಿ ಪರದಾಡುತ್ತಿದ್ದು, ಎಂಟು ವರ್ಷಗಳ ನಂತರ ವಿಶ್ವ ಚಾಂಪಿಯನ್‌ಷಿಪ್‌ಗೆ ಮರಳಿದ್ದಾರೆ. ಅವರು 74 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಸಾಕ್ಷಿ ಮಲಿಕ್‌ ಕೂಡ ಇತ್ತೀಚಿನ ತಿಂಗಳಲ್ಲಿ ಅಂಥ ಗಮನಾರ್ಹ ಸಾಧನೆ ತೋರಿಲ್ಲ. 2017ರ ಕಾಮನ್‌ವೆಲ್ತ್ ಕೂಟದ ನಂತರ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೆಲ್ಲಲು ಆಗಿಲ್ಲ. ಡಾನ್‌ ಕೊಲೊವ್‌ನಲ್ಲಿ ರನ್ನರ್ ಅಪ್‌ ಆಗಿದ್ದೇ ಇದ್ದುದರಲ್ಲಿ ಉತ್ತಮ ಸಾಧನೆ. ಪದಕ ಗೆದ್ದಲು ಹಾದಿಯಲ್ಲಿ ಅವರು ಹಾಲಿ ವಿಶ್ವ ಚಾಂಪಿಯನ್‌ ಪೆಟ್ರಾ ಒಲ್ಲಿ ವಿರುದ್ಧ ಜಯಗಳಿಸಿದ್ದರು.

ದಿವ್ಯಾ ಕಕ್ರಾನ್‌ ಕೂಡ ಉತ್ಸಾಹಿ ಕುಸ್ತಿಪಟುವಾಗಿದ್ದಾರೆ. ಈ ವರ್ಷ ಎರಡು ಚಿನ್ನ, ಎರಡು ಕಂಚಿನ ಪದಕಗಳನ್ನು ಕೊರಳಿಗೇರಿಸಿಕೊಂಡು ತಮ್ಮನ್ನು ಕಡೆಗಣಿಸುವಂತಿಲ್ಲ ಎಂದು ಸಾರಿದ್ದಾರೆ.

ಭಾರತ ತಂಡ:

ಪುರುಷರ ಫ್ರೀಸ್ಟೈಲ್‌: ರವಿಕುಮಾರ್‌ (57 ಕೆ.ಜಿ), ರಾಹುಲ್‌ ಅವರೆ (61 ಕೆ.ಜಿ), ಭಜರಂಗ್‌ ಪುನಿಯಾ (65 ಕೆ.ಜಿ), ಕರಣ್‌ (70 ಕೆ.ಜಿ), ಸುಶೀಲ್‌ ಕುಮಾರ್‌ (74 ಕೆ.ಜಿ), ಜಿತೇಂದರ್‌ (79 ಕೆ.ಜಿ), ದೀಪಕ್‌ ಪುನಿಯಾ (86 ಕೆ.ಜಿ), ಪ್ರವೀಣ್‌ (92 ಕೆ.ಜಿ), ಮೌಸಮ್‌ ಖತ್ರಿ (97 ಕೆ.ಜಿ) ಮತ್ತು ಸುಮಿತ್‌ ಮಲಿಕ್‌ (125 ಕೆ.ಜಿ).

ಗ್ರೀಕೊ ರೋಮನ್‌: ಮಂಜೀತ್‌ (55 ಕೆ.ಜಿ), ಮನೀಷ್‌ (60 ಕೆ.ಜಿ), ಸಾಗರ್‌ (63 ಕೆ.ಜಿ), ಮನೀಶ್‌ (67 ಕೆ.ಜಿ), ಯೋಗೀಶ್‌ (72 ಕೆ.ಜಿ), ಗುರ್‌ಪ್ರೀತ್‌ ಸಿಂಗ್‌ (77 ಕೆ.ಜಿ), ಹರ್‌ಪ್ರೀತ್‌ ಸಿಂಗ್‌ (82 ಕೆ.ಜಿ), ಸುನೀಲ್‌ ಕುಮಾರ್‌ 987 ಕೆ.ಜಿ), ರವಿ (97 ಕೆ.ಜಿ) ಮತ್ತು ನವೀನ್‌ (130 ಕೆ.ಜಿ).

ಮಹಿಳಾ ಫ್ರೀಸ್ಟೈಲ್‌: ಸೀಮಾ (50 ಕೆ.ಜಿ), ವಿನೇಶಾ ಪೊಗಟ್‌ (53 ಕೆ.ಜಿ), ಲಲಿತಾ (55 ಕೆ.ಜಿ), ಸರಿತಾ (57 ಕೆ.ಜಿ), ಪೂಜಾ ಧಂಡಾ (59 ಕೆ.ಜಿ), ಸಾಕ್ಷಮಿ ಮಲಿಕ್‌ (62 ಕೆ.ಜಿ), ನವಜೋತ್ ಕೌರ್‌ (65 ಕೆ.ಜಿ), ದಿವ್ಯಾ ಕಕ್ರಾನ್ (68 ಕೆ.ಜಿ), ಕೋಮಲ್‌ ಭಗವಾನ್‌ ಗೋಲೆ (72 ಕೆ.ಜಿ) ಮತ್ತು ಕಿರಣ್‌ (76 ಕೆ.ಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.