ADVERTISEMENT

ಏಷ್ಯನ್‌ ಶೂಟಿಂಗ್‌ | ಅನೀಶ್‌ಗೆ ಕಂಚು: ಭಾರತದ ಪದಕಗಳ ಸಂಖ್ಯೆ 75ಕ್ಕೆ ಏರಿಕೆ

ಪಿಟಿಐ
Published 11 ಫೆಬ್ರುವರಿ 2026, 15:27 IST
Last Updated 11 ಫೆಬ್ರುವರಿ 2026, 15:27 IST
ಕಂಚಿನ ಪದಕ ಗೆದ್ದ ಅನೀಶ್ ಭನ್ವಾಲಾ
ಕಂಚಿನ ಪದಕ ಗೆದ್ದ ಅನೀಶ್ ಭನ್ವಾಲಾ   

ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಅನೀಶ್ ಭನ್ವಾಲಾ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ ಪುರುಷರ 25 ಮೀಟರ್ ರ‍್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.

ಕಜಾಕಸ್ತಾನದ ಶೂಟರ್‌ಗಳು ಸ್ಪರ್ಧೆಯ ಎಂಟನೇ ದಿನವಾದ ಬುಧವಾರ ನಾಲ್ಕು ಚಿನ್ನದ ಪದಕಗಳೊಂದಿಗೆ ಪ್ರಾಬಲ್ಯ ಮೆರೆದರು. ಹರಿಯಾಣದ 23 ವರ್ಷದ ಅನೀಶ್‌ ಕೂಟದಲ್ಲಿ ಮೂರನೇ ಪದಕ ಗೆದ್ದರು.

ಜೂನಿಯರ್ ಪುರುಷರ 50 ಮೀ. ರೈಫಲ್ ಪ್ರೋನ್ (ಅಂಗಾತ ಸ್ಥಿತಿಯಲ್ಲಿ ಶೂಟ್‌ ಮಾಡುವ) ಸ್ಪರ್ಧೆಯಲ್ಲಿ ಅಡ್ರಿಯನ್ ಕರ್ಮಾಕರ್ ಚಿನ್ನದ ಸಾಧನೆ ಮೆರೆದರೆ, 25 ಮೀ. ಆರ್‌ಎಫ್‌ಪಿ ಸ್ಪರ್ಧೆಯಲ್ಲಿ ಆತಿಥೇಯ ತಂಡ ಸ್ವರ್ಣ ಗೆದ್ದಿತು. ಇನ್ನೂ ಎರಡು ದಿನಗಳ ಸ್ಪರ್ಧೆಗಳು ಬಾಕಿ ಇರುವಾಗ ಭಾರತ 75 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಅದರಲ್ಲಿ 41 ಚಿನ್ನ, 19 ಬೆಳ್ಳಿ ಮತ್ತು 15 ಕಂಚು ಒಳಗೊಂಡಿವೆ.

ADVERTISEMENT

ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಗಳಿಸಿದ್ದ ಅನೀಶ್ (23) ಫೈನಲ್‌ನಲ್ಲಿ ನಿಖರ ಗುರಿಯಿಟ್ಟು ಮೂರನೇ ಸ್ಥಾನ ಪಡೆದರು. ವಿಶ್ವಕಪ್ ಚಾಂಪಿಯನ್‌ ಜಪಾನಿನ ಡೈ ಯೋಶಿಯೋಕಾ (31) ವಿಶ್ವ ಮತ್ತು ಏಷ್ಯನ್‌ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಮಾಜಿ ಚಾಂಪಿಯನ್ ಕಜಾಕಸ್ತಾನದ ನಿಕಿತಾ ಚಿರ್ಯುಕಿನ್ (28) ಬೆಳ್ಳಿ ತಮ್ಮದಾಗಿಸಿಕೊಂಡರು.

ಇದಕ್ಕೂ ಮೊದಲು ಕಜಾಕಸ್ತಾನದ ರೈಫಲ್ ಶೂಟರ್ ಇಸ್ಲಾಂ ಸತ್ಪಾಯೆವ್ (622.5) ಅವರು 50 ಮೀ. ರೈಫಲ್ ಪ್ರೋನ್ ಪುರುಷರ ಸ್ಪರ್ಧೆಗಳಲ್ಲಿ ಅವಳಿ ಚಿನ್ನದ ಸಾಧನೆ ಮಾಡಿದರು. ಅವರು ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಸ್ವರ್ಣ ಗೆದ್ದರು. ವೈಯಕ್ತಿಕ ಸ್ಪರ್ಧೆಯಲ್ಲಿ ಅವರದೇ ದೇಶದ ನಿಕಿತಾ ಶಕ್ತೋರಿನ್ (622.5), ಭಾರತದ ಬಾಬು ಸಿಂಗ್‌ ಪನ್ವಾರ್‌ (621.3) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ಪನ್ವಾರ್‌ ಅವರು ಸಮರವೀರ್ ಸಿಂಗ್ ಮತ್ತು ಸರ್ತಾಜ್ ಸಿಂಗ್ ತಿವಾನಾ ಅವರೊಂದಿಗೆ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. 

ಜೂನಿಯರ್ ಪುರುಷರ ರೈಫಲ್ ಪ್ರೋನ್ ವಿಭಾಗದಲ್ಲಿ ಭಾರತದ ಕರ್ಮಾಕರ್ 60 ಶಾಟ್‌ಗಳಲ್ಲಿ 621.7 ಅಂಕಗಳೊಂದಿಗೆ ಚಿನ್ನ ಗೆದ್ದರು. ಕಜಾಕಸ್ತಾನದ ಒಲೆಗ್ ನೊಸ್ಕೋವ್ (620.6) ಮತ್ತು ಟ್ಯಾಮರ್ಲಾನ್ ಕಬುಲೋವ್ (617.3) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಈ ಸ್ಪರ್ಧೆಯ ತಂಡ ವಿಭಾಗದ ಚಿನ್ನದ ಪದಕ ಕಜಾಕಸ್ತಾನದ ಪಾಲಾಯಿತು. 

ಜೂನಿಯರ್ ಪುರುಷರ 25 ಮೀಟರ್ ಆರ್‌ಎಫ್‌ಪಿ ಸ್ಪರ್ಧೆಯಲ್ಲಿ ಇಂಡೊನೇಷ್ಯಾದ ಮುಹಮ್ಮದ್ ಫವಾಜ್ ಅಡಿಟಿಯಾ ಫಾರೆಲ್ (29) ಅವರು ವಿಶ್ವ ಮತ್ತು ಏಷ್ಯನ್ ಜೂನಿಯರ್ ದಾಖಲೆಯೊಂದಿಗೆ ಚಾಂಪಿಯನ್‌ ಆದರು. ಭಾರತದ ಸೂರಜ್ ಶರ್ಮಾ 23 ಅಂಕಗಳೊಂದಿಗೆ ಬೆಳ್ಳಿ ಮತ್ತು ಮುಖೇಶ್ ನೆಲವಳ್ಳಿ 19 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.