ADVERTISEMENT

ಏಷ್ಯಾ ಕಪ್: ಇಂದು ಸೂಪರ್ ಫೋರ್ ಹಂತದ ಪಂದ್ಯ

ಪಿಟಿಐ
Published 3 ಸೆಪ್ಟೆಂಬರ್ 2025, 0:14 IST
Last Updated 3 ಸೆಪ್ಟೆಂಬರ್ 2025, 0:14 IST
<div class="paragraphs"><p>ಏಷ್ಯಾ ಕಪ್</p></div>

ಏಷ್ಯಾ ಕಪ್

   

ರಾಜಗೀರ್: ಗುಂಪು ಹಂತದಲ್ಲಿ ಪ್ರದರ್ಶಿಸಿದ ಆಟದಿಂದ ಉತ್ಸಾಹದಲ್ಲಿರುವ ಭಾರತ ತಂಡ ಈಗ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ‍ದಲ್ಲಿದೆ. ಆದರೆ ಏಷ್ಯಾ ಕಪ್ ಸೂಪರ್ ಫೋರ್ ಹಂತದಲ್ಲಿ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾ ಎದುರು ಬುಧವಾರ ಇಲ್ಲಿ ಆಡಲಿರುವ ಆತಿಥೇಯ ತಂಡವು ತನ್ನ ಪ್ರದರ್ಶನದ ಮಟ್ಟವನ್ನು ಎತ್ತರಿಸಬೇಕಾದ ಅಗತ್ಯವಿದೆ.

‘ಎ’ ಗುಂಪಿನಲ್ಲಿ ಭಾರತ ತಂಡವು ಚೀನಾ ವಿರುದ್ಧ 4–3, ಜಪಾನ್ ವಿರುದ್ಧ 3–2 ಮತ್ತು ಕಣದಲ್ಲಿರುವ ದುರ್ಬಲ ತಂಡವೆನಿಸಿದ ಕಜಾಕಸ್ತಾನ ವಿರುದ್ಧ 15–0 ಗೋಲುಗಳ ಜಯ ಪಡೆದು ಅಜೇಯ ಸಾಧನೆ ಪ್ರದರ್ಶಿಸಿತ್ತು.

ADVERTISEMENT

ಆದರೆ ಪ್ರಬಲ ತಂಡಗಳಾದ ಚೀನಾ ಮತ್ತು ಜಪಾನ್ ವಿರುದ್ಧ ಭಾರತದ ಆಟ ಅಂಥ ಉತ್ತಮ ಮಟ್ಟದಲ್ಲಿರಲಿಲ್ಲ. ಟೂರ್ನಿಯಲ್ಲಿ ಎರಡನೇ ಬಾರಿ ಭಾಗವಹಿಸಿದ್ದ ಕಜಾಕಸ್ತಾನ ವಿರುದ್ಧ ಗೆದ್ದ ರೀತಿ ಮಾತ್ರ ಸಮಾಧಾನ ಮೂಡಿಸಿದೆ.

ಕೊರಿಯಾ ಸಹ ಎಂದಿನ ಲಯದಲ್ಲಿ ಆಡಿಲ್ಲ. ‘ಬಿ’ ಗುಂಪಿನಲ್ಲಿ ಮಲೇಷ್ಯಾ ನಂತರ ಎರಡನೇ ಸ್ಥಾನ ಗಳಿಸಿ ಐದು ಬಾರಿಯ ಚಾಂಪಿಯನ್ ಸೂಪರ್‌ ಫೋರ್‌ಗೆ ಅರ್ಹತೆ ಪಡೆದಿದೆ. ಈ ಟೂರ್ನಿ ಗೆಲ್ಲುವ ನೆಚ್ಚಿನ ತಂಡವೆನಿಸಿರುವ ಕೊರಿಯಾ ಲೀಗ್ ಹಂತದಲ್ಲಿ ಮಲೇಷ್ಯಾ ಎದುರು ಆಘಾತಕಾರಿ 1–4 ಸೋಲನುಭವಿಸಿತ್ತು.

ಮಧ್ಯಾಹ್ನದ ಪಂದ್ಯಗಳನ್ನು ಆಡುವಾಗ ಕೊರಿಯನ್ನರು ಇಲ್ಲಿನ ಬಿಸಿಲು ಮತ್ತು ಸೆಕೆಯಿಂದ ಸುಸ್ತಾಗಿದ್ದರು. ಆದರೆ ಸೂಪರ್ ಫೋರ್ ಹಂತದ ಪಂದ್ಯಗಳು ಸಂಜೆಯಿಂದ ನಡೆಯುತ್ತಿವೆ. ಮಂಗಳವಾರದ ವಿರಾಮವೂ ತಂಡಕ್ಕೆ ಸ್ವಲ್ಪ ನೆರವಾಗಬಹುದು.

ಸೋಮವಾರ ಕಜಾಕಸ್ತಾನ ತಂಡದ ಎದುರು ಭಾರತ ಎಲ್ಲ – ಗೋಲ್‌ ಕೀಪಿಂಗ್‌, ಡಿಫೆನ್ಸ್, ಮಿಡ್‌ಫೀಲ್ಡ್ ಅಥವಾ ದಾಳಿ– ವಿಭಾಗಗಳಲ್ಲಿ ಉತ್ತಮವಾಗಿ ಆಡಿದೆ. ಅಭಿಷೇಕ್ ನಾಲ್ಕು ಗೋಲು ಗಳಿಸಿ ಗಮನಸೆಳೆದಿದ್ದಾರೆ. ಆದರೆ ಮುನ್ಪಡೆಯಲ್ಲಿರುವ ದಿಲ್‌ಪ್ರೀತ್ ಸಿಂಗ್ ಟೂರ್ನಿಯಲ್ಲಿ ಅಷ್ಟೇನೂ ಯಶಸ್ಸು ಕಂಡಿಲ್ಲ. ಅವರು ಲಯ ಕಂಡುಕೊಳ್ಳಬೇಕಾಗಿದೆ.

ಆದರೆ ಚೀಫ್‌ ಕೋಚ್‌ ಕ್ರೇಗ್‌ ಫುಲ್ಟನ್‌ ಅವರು ತಂಡದ ಫಾರ್ವರ್ಡ್‌ ಆಟಗಾರರ ಮೇಲೆ ಭರವಸೆ ಹೊಂದಿದ್ದಾರೆ.

ಇನ್ನೊಂದು ಮುಖಾಮುಖಿ:

ಬುಧವಾರ ನಡೆಯುವ ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ ತಂಡವು, ಸಾಕಷ್ಟು ಸುಧಾರಣೆ ಕಂಡಿರುವ ಚೀನಾ ತಂಡವನ್ನು ಎದುರಿಸಲಿದೆ.

ಸೂಪರ್‌ ಫೋರ್ ಹಂತದಲ್ಲಿ ಎಲ್ಲ ತಂಡಗಳು ಮೂರು ಎದುರಾಳಿಗಳ ವಿರುದ್ಧ ಆಡಲಿವೆ. ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಭಾನುವಾರ ಫೈನಲ್‌ನಲ್ಲಿ ಎದುರಾಗಲಿವೆ.

ಪಂದ್ಯ ಆರಂಭ: ರಾತ್ರಿ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.