ADVERTISEMENT

ಏಷ್ಯನ್‌ ಕ್ರೀಡಾಕೂಟ: ಜಾವೆಲಿನ್‌ ಥ್ರೋದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ನೀರಜ್‌

ಬೆಳ್ಳಿ ಜಯಿಸಿದ ಧರುಣ್‌ ಅಯ್ಯಸಾಮಿ , ಸುಧಾ ಸಿಂಗ್‌, ನೀನಾ ವರಕಿಲ್‌

ಪಿಟಿಐ
Published 27 ಆಗಸ್ಟ್ 2018, 18:31 IST
Last Updated 27 ಆಗಸ್ಟ್ 2018, 18:31 IST
ನೀರಜ್‌ ಚೋಪ್ರಾ -ರಾಯಿಟರ್ಸ್‌ ಚಿತ್ರ
ನೀರಜ್‌ ಚೋಪ್ರಾ -ರಾಯಿಟರ್ಸ್‌ ಚಿತ್ರ   

ಜಕಾರ್ತ: ಭಾರತದ ನೀರಜ್‌ ಚೋಪ್ರಾ ಅವರು ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಹೆಗ್ಗಳಿಕೆ ಗಳಿಸಿದರು.

1982ರ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಗುರ್ತೇಜ್‌ ಸಿಂಗ್‌ ಅವರು ಕಂಚಿನ ಪದಕ ಗೆದ್ದಿದ್ದರು.

ಸೋಮವಾರ ನಡೆದ ಫೈನಲ್ಸ್‌ನಲ್ಲಿ 20 ವರ್ಷದ ಭಾರತದ ಕ್ರೀಡಾಪಟು ತಮ್ಮ ಮೂರನೇ ಅವಕಾಶದಲ್ಲಿ 88.06 ಮೀಟರ್ಸ್‌ ದೂರ ಜಾವೆಲಿನ್‌ ಎಸೆದರು. ಇದರೊಂದಿಗೆ ತಮ್ಮದೇ ರಾಷ್ಟ್ರೀಯ ದಾಖಲೆ ಸರಿಗಟ್ಟಿದರು. ದೋಹಾದಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ಅವರು 87.43 ಮೀಟರ್ಸ್‌ ಸಾಮರ್ಥ್ಯ ತೋರಿದ್ದರು.

ADVERTISEMENT

ಮೊದಲ ಅವಕಾಶದಲ್ಲಿ ಅವರು 83.43 ಮೀಟರ್ಸ್‌ ದೂರ ಜಾವೆಲಿನ್‌ ಎಸೆದರು. ಎರಡನೇ ಅವಕಾಶದಲ್ಲಿ ಫೌಲ್‌ ಮಾಡಿಕೊಂಡರು.

ಚೀನಾದ ಲಿಯು ಕ್ವಿಜೆನ್‌, 82.22 ಮೀಟರ್ಸ್ ಸಾಮರ್ಥ್ಯ ತೋರಿ ಬೆಳ್ಳಿ ಪದಕ ಗೆದ್ದರು. ಪಾಕಿಸ್ತಾನದ ಅರ್ಷದ್‌ ನದೀಮ್‌, 80.75 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ಕಂಚಿಗೆ ತೃಪ್ತಿಪಟ್ಟುಕೊಂಡರು.

ಹಿಂದಿನ ಬಾರಿಯ ಕ್ರೀಡಾಕೂಟದಲ್ಲಿ 91.36 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ಚಿನ್ನ ಗೆದ್ದಿದ್ದಚಾವೊ ಸುನ್‌ ಚೆಂಗ್‌ ಅವರು ನಿರಾಸೆ ಅನುಭವಿಸಿದರು. ಚೀನಾ ತೈಪೆಯ ಈ ಅಥ್ಲೀಟ್‌ 79.81 ಮೀಟರ್ಸ್‌ ಸಾಮರ್ಥ್ಯ ತೋರಿದರು.

ನೀರಜ್‌, ಏಷ್ಯನ್‌ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತದ ಅಥ್ಲೀಟ್‌ಗಳನ್ನು ಮುನ್ನಡೆಸಿದ್ದರು.
**

ಧರುಣ್‌ ಅಯ್ಯಸಾಮಿ, ಸುಧಾಗೆ ಬೆಳ್ಳಿ

ಭಾರತದ ದೂರ ಅಂತರದ ಓಟಗಾರ್ತಿ ಸುಧಾ ಸಿಂಗ್‌ ಬೆಳ್ಳಿಯ ಪದಕ ಗೆದ್ದರು.

ಮಹಿಳೆಯರ 3000 ಮೀಟರ್ಸ್‌ ಸ್ಟೀಪಲ್‌ಚೇಸ್‌ನಲ್ಲಿ ಸುಧಾ ಅವರು ಎರಡನೇ ಸ್ಥಾನ ಗಳಿಸಿದರು. ಅವರು 9 ನಿಮಿಷ 40.03 ಸೆಕೆಂಡುಗಳಲ್ಲಿ ದೂರ ಕ್ರಮಿಸಿದರು.

ಬಹರೇನ್‌ನ ವಿನ್‌ಫ್ರೆಡ್‌ ಯವಿ, 9 ನಿಮಿಷ 36.62 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಸಾಧನೆ ಮಾಡಿದರು. ವಿಯೆಟ್ನಾಂನ ಓನ್‌ ತಿ ಗ್ಯುಯನ್‌ ಅವರು ಕಂಚಿಗೆ ತೃಪ್ತಿಪಟ್ಟುಕೊಂಡರು. ಅವರು 9 ನಿಮಿಷ 43.83 ಸೆಕೆಂಡುಗಳಲ್ಲಿ ದೂರ ತಲುಪಿದರು.

2010ರ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ 3000 ಮೀಟರ್ಸ್‌ ಸ್ಟೀಪಲ್‌ಚೇಸ್‌ ಅನ್ನು ಸೇರಿಸಲಾಗಿತ್ತು. ಇದರಲ್ಲಿಸುಧಾ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

ಸುಧಾ ಸಿಂಗ್‌ (ಎಡತುದಿ)

ಪುರುಷರ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಭಾರತದ ಧರುಣ್‌ ಅಯ್ಯಸಾಮಿ ಅವರು ಬೆಳ್ಳಿಗೆ ಮುತ್ತಿಕ್ಕಿದ್ದಾರೆ.

ಭಾರತದ ಅಥ್ಲೀಟ್‌ 48.96 ಸೆಕೆಂಡುಗಳಲ್ಲಿ ದೂರ ಕ್ರಮಿಸಿದರು. ಈ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದರು. ಮಾರ್ಚ್‌ನಲ್ಲಿ ನಡೆದ ಫೆಡರೇಷನ್‌ ಕಪ್‌ನಲ್ಲಿ ಅವರು 49.45 ಸೆಕೆಂಡುಗಳಲ್ಲಿ ದೂರ ಕ್ರಮಿಸಿದ್ದರು.

ಕತಾರ್‌ನ ಅಬ್ದೇರ್‌ಹಮಾನ್‌ ಸಾಂಬಾ ಅವರು 47.66 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಜಪಾನ್‌ನ ಟಕಟೋಶಿ ಅಬೆ ಅವರು 49.12 ಸೆಕೆಂಡುಗಳಲ್ಲಿ ದೂರ ಕ್ರಮಿಸಿ ಕಂಚು ಗೆದ್ದರು.

ಧರುಣ್‌ ಅಯ್ಯಸಾಮಿ

ನೀನಾ ವರಕಿಲ್‌ ಬೆಳ್ಳಿಯ ಸಾಧನೆ:

ಭಾರತದ ನೀನಾ ವರಕಿಲ್‌ ಅವರು ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ.

ನೀನಾ ವರಕಿಲ್‌

ಮಹಿಳೆಯರ ವಿಭಾಗದಲ್ಲಿ ನೀನಾ, ನಾಲ್ಕನೇ ಅವಕಾಶದಲ್ಲಿ 6.51 ಮೀಟರ್ಸ್‌ ದೂರ ಜಿಗಿದು ಈ ಸಾಧನೆ ಮಾಡಿದರು.

ವಿಯೆಟ್ನಾಂನ ತಾವೊ ತು ತುಯಿ ಬುಯಿ, 6.55 ಮೀಟರ್ಸ್‌ ದೂರ ಜಿಗಿದು ಚಿನ್ನಕ್ಕೆ ಕೊರಳೊಡ್ಡಿದರು. ಚೀನಾದ ಕ್ಸಿಯಾಲಿಂಗ್‌ ಕ್ಸು, 6.50 ಮೀಟರ್ಸ್‌ ದೂರ ಜಿಗಿದು ಕಂಚಿನ‍ಪದಕ ತಮ್ಮದಾಗಿಸಿಕೊಂಡರು.
**


ಮಂಗಳವಾರದ ಸ್ಪರ್ಧೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.