ADVERTISEMENT

Tokyo Olympics | ಮಿಂಚು ಹರಿಸಿದ ತಾರೆಗಳು; ಗಣಿತದ ಟೀಚರ್ ಈಗ ಚಿನ್ನದ ಹುಡುಗಿ

ಗಿರೀಶದೊಡ್ಡಮನಿ
Published 31 ಜುಲೈ 2021, 19:30 IST
Last Updated 31 ಜುಲೈ 2021, 19:30 IST
ಆನಾ ಕಿಸನ್‌ಹಾಫರ್
ಆನಾ ಕಿಸನ್‌ಹಾಫರ್   

‘ಓದಿ ಬರೆದರೆ ನವಾಬನಾಗುತ್ತಿ, ಆಡಿದರೆ ಹಾಳಾಗುತ್ತಿ’ ಎಂಬ ಹಳೆಯ ಗಾದೆಯೊಂದಿದೆ. ಆದರೆ, ಓದು ಮತ್ತು ಕ್ರೀಡೆ ಎರಡರಲ್ಲೂ ಏಕಕಾಲಕ್ಕೆ ಸಾಧನೆ ಸಾಧ್ಯ ಎಂದು ಒಲಿಂಪಿಕ್ ಸೈಕ್ಲಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ಆಸ್ಟ್ರಿಯಾದ ಆನಾ ಕಿಸನ್‌ಹಾಫರ್ ತೋರಿಸಿಕೊಟ್ಟಿದ್ದಾರೆ. ಸಿರಿಯಾದ ಪೋರಿ ಹೆಂಡ್‌ ಜಾಜಾ ಹಾಗೂ ಕುವೈತ್‌ನ ಅಬ್ದುಲ್‌ ಅಲ್‌ ರಶೀದಿ ಅವರೂ ಒಲಿಂಪಿಕ್‌ ಅಂಗಳದಲ್ಲಿ ಗಮನ ಸೆಳೆದಿದ್ದಾರೆ. ಯುವಪೀಳಿಗೆಗೆ ಈ ಕ್ರೀಡಾಪಟುಗಳು ಉತ್ಸಾಹದ ಚಿಲುಮೆಯಾಗಿದ್ದಾರೆ...

**

ಆನಾ ಕಿಸನ್‌ಹಾಫರ್..
ಈ ಹೆಣ್ಣುಮಗಳು ಆಸ್ಟ್ರಿಯಾ ದೇಶದಲ್ಲಿ ಹಲವರಿಗೆ ಗಣಿತಶಾಸ್ತ್ರಜ್ಞೆಯಾಗಿ ಚಿರಪರಿಚಿತರು. ಆದರೆ ಈಗ ಅವರು ವಿಶ್ವದ ಗಮನ ಸೆಳೆದು ಪ್ರೇರಣೆಯ ಕಥೆಯಾಗಿದ್ದಾರೆ. ಆದರೆ ಅದು ಗಣಿತದ ಸಾಧನೆಗಾಗಿ ಅಲ್ಲ!

ADVERTISEMENT

ಟೋಕಿಯೊ ಒಲಿಂಪಿಕ್ ಕೂಟದ ಮಹಿಳೆಯರ ರಸ್ತೆ ಸೈಕ್ಲಿಂಗ್‌ನಲ್ಲಿ ಚಿನ್ನ ಗೆದ್ದ 30 ವರ್ಷದ ಆನಾ ಕಿಸನ್‌ಹಾಫರ್ ಈಗ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ‘ಆಡುವುದರಲ್ಲಿಯೇ ಕಾಲ ಕಳೆಯುವ ಮಕ್ಕಳು ಓದಿನಲ್ಲಿ ಹಿಂದುಳಿಯುತ್ತಾರೆ. ವಿದ್ಯಾಭ್ಯಾಸದಲ್ಲಿ ದೊಡ್ಡ ಸಾಧನೆ ಮಾಡಬೇಕಾದರೆ ಆಟೋಟದಲ್ಲಿ ಹೆಚ್ಚು ಸಮಯ ಕಳೆಯಬಾರದು. ಕ್ರೀಡಾಪಟುಗಳಿಗೆ ವಿದ್ಯೆ ತಲೆಗೆ ಹತ್ತುವುದಿಲ್ಲ’ ಎಂಬ ಅನಿಸಿಕೆಗಳನ್ನು ಆನಾ ಸುಳ್ಳು ಮಾಡಿದ್ದಾರೆ. ಓದಿಗಾಗಿ ಆಟ ಬಿಡಬೇಕಿಲ್ಲ, ಕ್ರೀಡೆಗಾಗಿ ಓದನ್ನು ತಪ್ಪಿಸಬೇಕಿಲ್ಲ ಎಂಬುದನ್ನು ತೋರಿಸಿದ್ದಾರೆ. ಅಷ್ಟೇ ಅಲ್ಲ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಕೂಡ ಗೆಲ್ಲಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.

125 ವರ್ಷಗಳ ಇತಿಹಾಸ ಇರುವ ಆಧುನಿಕ ಒಲಿಂಪಿಕ್ಸ್‌ನಲ್ಲಿ ಆಸ್ಟ್ರಿಯಾಕ್ಕೆ ಸೈಕ್ಲಿಂಗ್‌ನಲ್ಲಿ ಲಭಿಸಿದ ಮೊದಲ ಚಿನ್ನದ ಪದಕ ಆನಾ ಅವರದ್ದು. 137 ಕಿಲೊ ಮೀಟರ್ಸ್‌ ರಸ್ತೆ ಸೈಕ್ಲಿಂಗ್‌ನಲ್ಲಿ ಅವರು ಮೂಡಿಸಿದ ಅಚ್ಚರಿ ಬಹಳ ದೊಡ್ಡದು. ಈ ಸ್ಪರ್ಧೆಯಲ್ಲಿ ಅವರು ರಿಯೊ ಒಲಿಂಪಿಕ್‌ ಚಿನ್ನದ ಪದಕ ವಿಜೇತೆ ಸೈಕ್ಲಿಸ್ಟ್ ನೆದರ್ಲೆಂಡ್ಸ್‌ನ ಅನಾ ವ್ಯಾನ್ ಡರ್‌ ಬ್ರಿಗೆನ್, ಒಲಿಂಪಿಕ್ ಕಂಚಿನ ಪದಕ ವಿಜೇತೆಯಾಗಿದ್ದ ಎಲಿಸಾ ಲೊಂಗೊ ಬಾರ್ಗಿನಿ, ಬ್ರಿಟನ್‌ನ ಲಿಜಿ ಡೀಗ್ನನ್, ಜರ್ಮನಿಯ ಲೀಸ್ ಬ್ರೆನೆರ್ ಮತ್ತು ಮಾಜಿ ವಿಶ್ವ ಚಾಂಪಿಯನ್ ಅನೆಮೀಕ್ ವ್ಯಾನ್ ವೆಲುಟೆನ್ ಅವರನ್ನು ಹಿಂದಿಕ್ಕಿದರು.

ಆನಾ ಕಿಸನ್‌ಹಾಫರ್ ತಮ್ಮ ಜೀವನದಲ್ಲಿ ಎಂದೂ ಒಲಿಂಪಿಕ್ ಚಿನ್ನ ಗೆಲ್ಲುವ ನಿರೀಕ್ಷೆಯನ್ನೂ ಇಟ್ಟುಕೊಂಡಿರಲಿಲ್ಲ. ಸುಮ್ಮನೆ ಹವ್ಯಾಸ, ಫಿಟ್‌ನೆಸ್‌ಗಾಗಿ ಆರಂಭವಾದ ಸೈಕ್ಲಿಂಗ್‌ನಲ್ಲಿ ಅವರು ಈ ಎತ್ತರಕ್ಕೆ ಏರಿದ್ದಾರೆ. ವೃತ್ತಿಪರ ಸೈಕ್ಲಿಸ್ಟ್‌ ಪಡೆಯುವ ವಿಶೇಷ ತರಬೇತಿಯಾಗಲಿ, ತರಬೇತುದಾರನಾಗಲಿ ಅವರಿಗಿಲ್ಲ. ಸ್ಪರ್ಧೆ ನಡೆಯುವ ನಾಲ್ಕು ದಿನಗಳ ಹಿಂದಷ್ಟೇ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, ‘ಒಲಿಂಪಿಕ್‌ನಲ್ಲಿ ಭಾಗವಹಿಸುವ ಆಸೆ ಈಗ ಈಡೇರುತ್ತದೆ’ ಎಂದಷ್ಟೇ ಬರೆದುಕೊಂಡಿದ್ದರು. ಕೂಟಕ್ಕೆ ಅವಕಾಶ ಸಿಕ್ಕಿದ್ದೇ ದೊಡ್ಡ ಸಾಧನೆಯೆಂಬ ಭಾವ ಅವರಲ್ಲಿತ್ತು. ಆದರೆ ಇಡೀ ಕ್ರೀಡಾಜಗತ್ತು ನಿಬ್ಬೆರಗಾಗುವಂತಹ ಸಾಧನೆಯನ್ನು ಮಾಡಿದರು. ‘ಒಲಿಂಪಿಕ್ ಇತಿಹಾಸದಲ್ಲಿಯೇ ಅತಿದೊಡ್ಡ ಅಚ್ಚರಿಯ ಸಾಧನೆ ಇದು’ ಎಂದು ಜಗತ್ತು ಬಣ್ಣಿಸುತ್ತಿದೆ.

ಅನಾ ಕಿಸನ್‌ಹಾಫರ್ ಚಿನ್ನ ಗೆದ್ದ ಸಂಭ್ರಮ –ರಾಯಿಟರ್ಸ್ ಚಿತ್ರ

ಗಣಿತದ ಪ್ರೀತಿ, ಆಟದ ಅಚ್ಚುಮೆಚ್ಚು
ಆನಾಗೆ ಬಾಲ್ಯದಿಂದಲೂ ಗಣಿತದ ಲೆಕ್ಕಗಳು ಮತ್ತು ಆಟಗಳೆಂದರೆ ಅಚ್ಚುಮೆಚ್ಚು. ಆದರೆ, ಕೌಟುಂಬಿಕ ವಾತಾವರಣದಲ್ಲಿ ಓದಿಗೆ ಹೆಚ್ಚು ಪ್ರಾಧಾನ್ಯ ಇತ್ತು. ಇವರೂ ಶಾಲೆಯಲ್ಲಿ ಚುರುಕಾಗಿದ್ದರು. ಅದರಲ್ಲೂ ಗಣಿತದಲ್ಲಿ ಎತ್ತಿದ ಕೈ. 2008–11 ವಿಯೆನ್ನಾದ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅವರು ಗಣಿತಶಾಸ್ತ್ರ ಅಧ್ಯಯನ ಮಾಡಿದರು. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಕ್ಯಾಟೊಲೊನಿಯಾದ ಪಾಲಿಟೆಕ್ನಿಕ್‌ ವಿಶ್ವವಿದ್ಯಾಲಯದಿಂದ ಗಣಿತ ಪ್ರಬಂಧಕ್ಕೆ ಪಿಎಚ್‌.ಡಿ. ಕೂಡ ಗಳಿಸಿದರು. ಸದ್ಯ ಲಾಸೆನ್‌ನಲ್ಲಿರುವ ಇಕೊಲ್ ಪಾಲಿಟೆಕ್ನಿಕ್ ಫೆಡರಲ್ ಡಿ ಲಾಸನ್‌ ಸಂಸ್ಥೆಯಲ್ಲಿ ಪೋಸ್ಟ್ ಡಾಕ್ಟರಲ್ ರಿಸರ್ಚರ್ ಆಗಿದ್ದಾರೆ.

ಓದಿನ ಏಕತಾನತೆ ಮತ್ತು ಒತ್ತಡವನ್ನು ನಿಭಾಯಿಸಲು ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಿದ್ದರು. 2011ರಲ್ಲಿ ಟ್ರಯಥ್ಲಾನ್ ಮತ್ತು ಡುಯಥ್ಲಾನ್‌ನಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ ಒಂದು ಬಾರಿ ಬಿದ್ದು ಗಾಯಗೊಂಡ ನಂತರ ಶಸ್ತ್ರಚಿಕಿತ್ಸೆಗೊಳಗಾದರು. ಅದರಿಂದಾಗಿ ಅವರು ಹಲವು ತಿಂಗಳುಗಳವರೆಗೆ ಓಡುವ ಅಭ್ಯಾಸವನ್ನು ಬಿಟ್ಟರು. ಚೇತರಿಸಿಕೊಂಡ ನಂತರವೂ ಓಡುವುದು ಸುಲಭವಾಗಿರಲಿಲ್ಲ. ಆದ್ದರಿಂದ ಸೈಕ್ಲಿಂಗ್‌ನತ್ತ ವಾಲಿದರು. ಹೆಚ್ಚು ಶ್ರಮ ಮತ್ತು ಸಮಯ ಬೇಡುವ ಈ ಕ್ರೀಡೆಯ ಜೊತೆಗೆ ಗಣಿತ ಅಧ್ಯಯನ, ಸಂಶೋಧನೆಯನ್ನೂ ಮುಂದುವರಿಸಿದರು.

2014ರಲ್ಲಿ ಕ್ಯಾಟಲಾನ್ ಎಂಬ ಹವ್ಯಾಸಿ ಸೈಕ್ಲಿಂಗ್ ತಂಡವನ್ನು ಸೇರಿಕೊಂಡರು. ಮೊದಲಿಗೆ ಸಣ್ಣ ಅಂತರದ ಸೈಕ್ಲಿಂಗ್‌ಗಳಲ್ಲಿ ಭಾಗವಹಿಸುತ್ತಿದ್ದ ಅವರು, 2016ರಲ್ಲಿ ಅಂತರರಾಷ್ಟ್ರೀಯ ಸೈಕ್ಲಿಂಗ್‌ನಲ್ಲಿ ಭಾಗವಹಿಸಲು ಆರಂಭಿಸಿದರು. ನ್ಯೂಯಾರ್ಕ್‌ನ ಗ್ರ್ಯಾನ್ ಫಾಂಡೊ ರೇಸ್‌ನಲ್ಲಿ ಗೆದ್ದ ನಂತರ ಅವರ ಆತ್ಮವಿಶ್ವಾಸ ಹೆಚ್ಚಿತು. ಪ್ರತಿಷ್ಠಿತ ಟೂರ್ ಡಿ ಆರ್ಡೆಷ್‌ನಲ್ಲಿ ಭಾಗವಹಿಸಿದ್ದರು. ಆದರೆ ಮೊದಲ ಸ್ಟೇಜ್‌ನಲ್ಲಿ ಬಿದ್ದು ಗಾಯಗೊಂಡ ಅವರು ಹಿಂದೆ ಸರಿಯಬೇಕಾಯಿತು. ಆದರೆ ಈ ಯಾವ ಅಡೆತಡೆಗಳೂ ಅವರನ್ನು ಸೈಕ್ಲಿಂಗ್ ಪ್ರೀತಿಯಿಂದ ದೂರ ಮಾಡಲಿಲ್ಲ. ಆಸ್ಟ್ರಿಯಾ ನ್ಯಾಷನಲ್ ರೇಸ್‌ಗಳಲ್ಲಿ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

ಟೋಕಿಯೊದಲ್ಲಿ ಏರಿಳಿತದ ರಸ್ತೆಗಳಲ್ಲಿ ಬಿರುಬಿಸಿಲನ್ನೂ ಲೆಕ್ಕಿಸದೇ ವಿಶ್ವವಿಖ್ಯಾತ ಸೈಕ್ಲಿಸ್ಟ್‌ಗಳನ್ನು ಹಿಂದಿಕ್ಕಿ ಇತಿಹಾಸ ಬರೆದರು. ಮೂರು ಗಂಟೆ, 52 ನಿಮಿಷ 45 ಸೆಕೆಂಡುಗಳಲ್ಲಿ 137 ಕಿ.ಮೀ ಕ್ರಮಿಸಿದರು.

‘ಅಗ್ರ 25ರಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ನನಗಿತ್ತು. ಚಿನ್ನ ಗೆದ್ದಿರುವ ಬಗ್ಗೆ ನನಗೆ ನಂಬಿಕೆಯೇ ಆಗುತ್ತಿಲ್ಲ’ ಎಂದು ಕಣ್ಣರಳಿಸಿ ಹೇಳುವ ಆನಾ ಕಿಸನ್‌ಹಾಫರ್ ಕೋವಿಡ್ ಕಾಲಘಟ್ಟದ ಒಲಿಂಪಿಕ್ಸ್‌ನ ಅಚ್ಚರಿಯಾಗಿ ಹೊರಹೊಮ್ಮಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.