ADVERTISEMENT

ಕುಸ್ತಿ: ಬಜರಂಗ್‌, ವಿನೇಶಾಗೆ ‘ಎ’ ದರ್ಜೆ

ಕ್ರಾಂತಿಕಾರಿ ಗುತ್ತಿಗೆ ವ್ಯವಸ್ಥೆಗೆ ನಾಂದಿ ಹಾಡಿದ ಭಾರತ ಕುಸ್ತಿ ಫೆಡರೇಷನ್‌

ಪಿಟಿಐ
Published 30 ನವೆಂಬರ್ 2018, 20:15 IST
Last Updated 30 ನವೆಂಬರ್ 2018, 20:15 IST
ಬಜರಂಗ್ ಪೂನಿಯಾ
ಬಜರಂಗ್ ಪೂನಿಯಾ   

ಗೊಂಡ, ಉತ್ತರ ಪ್ರದೇಶ: ಗುತ್ತಿಗೆ ಪದ್ಧತಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇರಿಸಿರುವ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಬಜರಂಗ್ ಪೂನಿಯಾ, ವಿನೇಶಾ ಪೋಗಟ್ ಮತ್ತು ಪೂಜಾ ದಂಡಾ ಅವರನ್ನು ‘ಎ’ ದರ್ಜೆಯ ಗುತ್ತಿಗೆಯಡಿಗೆ ತಂದಿದೆ. ಇದರಡಿ ಇಬ್ಬರೂ ಒಂದು ವರ್ಷದ ಅವಧಿಕಗೆ ತಲಾ ₹ 30 ಲಕ್ಷ ಮೊತ್ತದ ಆರ್ಥಿಕ ನೆರವು ಪಡೆದುಕೊಳ್ಳಲಿದ್ದಾರೆ.

ಬಜರಂಗ್ ಮತ್ತು ವಿನೇಶಾ ಅವರು ಈ ಬಾರಿಯ ಕಾಮನ್‌ವೆಲ್ತ್ ಕೂಟ ಹಾಗೂ ಏಷ್ಯನ್ ಕೂಟಗಳಲ್ಲಿ ಚಿನ್ನ ಗೆದ್ದಿದ್ದರು. ಪೂಜಾ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತದ ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು.

ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿದ್ದ ಸುಶೀಲ್ ಕುಮಾರ್ ಮತ್ತು ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್‌ ‘ಎ’ ದರ್ಜೆಯಲ್ಲಿ ಸ್ಥಾನ ಗಳಿಸಲು ವಿಫಲರಾಗಿದ್ದಾರೆ. ಲಯಕ್ಕೆ ಮರಳಲು ಪ್ರಯತ್ನಿಸುತ್ತಿರುವ ಇವರಿಬ್ಬರಿಗೆ ‘ಬಿ’ ದರ್ಜೆ ನಿಗದಿ ಮಾಡಲಾಗಿದೆ. ಇದರಡಿ ಅವರು ಒಂದು ವರ್ಷಕ್ಕೆ ₹ 20 ಲಕ್ಷ ಪಡೆಯಲಿದ್ದಾರೆ.

ADVERTISEMENT

ಇಲ್ಲಿ ಶುಕ್ರವಾರ ಆರಂಭಗೊಂಡ ರಾಷ್ಟ್ರೀಯ ಸೀನಿಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್‌ ಸಿಂಗ್‌ ಈ ವಿಷಯ ತಿಳಿಸಿದರು.

₹ 10 ಲಕ್ಷ ನೆರವು ಒದಗಿಸುವ ‘ಸಿ’ ದರ್ಜೆಯ ಗುತ್ತಿಗೆಯಲ್ಲಿ ಸಂದೀಪ್ ತೋಮರ್‌, ಸಾಜನ್ ಭಾನ್‌ವಾಲ, ವಿನೋದ್ ಓಂ ಪ್ರಕಾಶ್‌, ರಿತು ಪೋಗಟ್‌, ಸುಮಿತ್ ಮಲಿಕ್‌, ದೀಪಾ ಪೂನಿಯಾ ಮತ್ತು ದಿವ್ಯಾ ಕಕ್ರಾನ್‌ ಇದ್ದಾರೆ.

‘ಡಿ’ ದರ್ಜೆಯಲ್ಲಿ ರಾಹುಲ್‌ ಆವಾರೆ, ನವೀನ್‌, ಸಚಿನ್ ರಾಟಿ, ವಿಜಯ್‌, ರವಿ ಕುಮಾರ್‌, ಸಿಮ್ರಾನ್‌, ಮಾನಸಿ ಮತ್ತು ಅಂಶು ಮಲಿಕ್‌ ಸೇರಿದ್ದಾರೆ. ಇವರಿಗೆ ತಲಾ ₹ 5 ಲಕ್ಷ ಸಿಗಲಿದೆ.

‘ಒಲಿಂಪಿಕ್ಸ್‌ನಲ್ಲಿ ಮಾಡಿದ ಸಾಧನೆಯ ಮೂಲಕ ಸುಶೀಲ್ ಕುಮಾರ್ ಭಾರತದಲ್ಲಿ ಕುಸ್ತಿಗೆ ಹೊಸ ಆಯಾಮ ತಂದುಕೊಟ್ಟರು.

*
ಯುವ ಕುಸ್ತಿಪಟುಗಳು ಭರವಸೆ ಉಳಿಸಿಕೊಳ್ಳಲು ಈ ಆರ್ಥಿಕ ನೆರವು ಸಹಾಯ ಮಾಡಲಿದೆ. ಕುಸ್ತಿ ಫೆಡರೇಷನ್‌ನ ನಿರ್ಧಾರಕ್ಕೆ ಅಭಾರಿಯಾಗಿದ್ದೇನೆ.
-ವಿನೇಶಾ ಪೋಗಟ್‌, ಭಾರತದ ಕುಸ್ತಿಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.