
ಮೂಡುಬಿದಿರೆ (ದಕ್ಷಿಣ ಕನ್ನಡ): ರಾಜಸ್ಥಾನದ ಚೂರೂ ಜಿಲ್ಲೆಯ ನಿರ್ಮಲಾ ಅವರು ಅಣ್ಣ, ದೂರ ಅಂತರದ ಓಟಗಾರ ಪ್ರೀತಂ ಸಿಂಗ್ ನೆರಳಿನಲ್ಲೇ ಓಟದ ಅಭ್ಯಾಸ ಮಾಡಿದ ಕಾಲೇಜು ವಿದ್ಯಾರ್ಥಿನಿ. ಪ್ರೀತಂ ಸಲಹೆಯಂತೆ 800 ಮೀಟರ್ಸ್ ಓಟದ ಟ್ರ್ಯಾಕ್‌ನಿಂದ 5 ಸಾವಿರ ಮತ್ತು 10 ಸಾವಿರ ಮೀಟರ್ಸ್ ಹಾದಿಗೆ ಹೊರಳಿದ ಅವರು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು.
ಆಳ್ವಾಸ್ ಕಾಲೇಜಿನಲ್ಲಿ ಪದವಿ ಓದುತ್ತಿರುವ ನಿರ್ಮಲಾ ಸೋಮವಾರ ಆರಂಭಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ಕೂಟದ ಮಹಿಳೆಯರ 10 ಸಾವಿರ ಮೀಟರ್ಸ್ ಓಟದಲ್ಲಿ ಮೊದಲಿಗರಾದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನಲ್ಲಿ ಅವರು 34 ನಿಮಿಷ 47:20 ಸೆಕೆಂಡುಗಳಲ್ಲಿ ಗುರಿ ತಲುಪಿದರು.
ಮುಂಜಾನೆಯ ಚಳಿಯಲ್ಲಿ ನಡೆದ ಸ್ಪರ್ಧೆಯಲ್ಲಿ ನಿರ್ಮಲಾ ಅವರು ಪುಣೆಯ ಸಾವಿತ್ರಿಭಾಯಿ ಫುಲೆ ವಿಶ್ವವಿದ್ಯಾಲಯದ ರವೀನಾ ಗಾಯಕವಾಡ್ (34ನಿ 48.7 ಸೆ) ಮತ್ತು ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ವಿವಿ ಅಂಜಲಿ ದೇವಿ (34:49.54) ಅವರ ಪ್ರಬಲ ಸವಾಲನ್ನು ಮೀರಿ ನಿಂತರು.
ಚಾಂಪಿಯನ್‌ಷಿಪ್‌ನ ಮೊದಲ ಸ್ಪರ್ಧೆ, ಪುರುಷರ 10,000 ಮೀಟರ್ಸ್ ಓಟದ ಚಿನ್ನ ಉತ್ತರಪ್ರದೇಶದ ಬರೇಲಿಯ ಮಹಾತ್ಮ ಜ್ಯೋತಿಬಾ ಫುಲೆ ವಿಶ್ವವಿದ್ಯಾಲಯದ ಪಾಲಾಯಿತು. 29 ನಿಮಿಷ 19:46 ಸೆಕೆಂಡುಗಳಲ್ಲಿ ಗುರಿ ತಲುಪಿದ ಗೌರವ್ ಚಿನ್ನದ ನಗೆ ಬೀರಿದರು. ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿಯ ಅವಕಾಶ್ (29:19.91) ಬೆಳ್ಳಿ ಮತ್ತು ಆದಿಕವಿ ಶ್ರೀ ಮಹರ್ಷಿ ವಿವಿಯ ಪ್ರಿನ್ಸ್‌ರಾಜ್ ಯಾದವ್ ಕಂಚಿನ ಪದಕ ಗಳಿಸಿದರು.
ಸಹೋದರನೇ ಕೋಚ್:
ನಿರ್ಮಲಾ ಕಳೆದ ಬಾರಿ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌ನಲ್ಲಿ ಬಿಕಾನೇರ್‌ನ ಮಹಾರಾಜ್ ಗಂಗಾಸಿಂಗ್ ವಿಶ್ವವಿದ್ಯಾಲಯದ ಪರವಾಗಿ ಕಣಕ್ಕಿಳಿದು 5 ಸಾವಿರ ಮೀಟರ್ಸ್ ಓಟದಲ್ಲಿ ಬೆಳ್ಳಿ ಗೆದ್ದಿದ್ದರು. ನಂತರ ಅಲ್ಲಿನ ದಾಖಲಾತಿಯನ್ನು ರದ್ದುಪಡಿಸಿ ಆಳ್ವಾಸ್‌ನ ದತ್ತು ಯೋಜನೆಯಡಿ ಕಲಿಯಲು ಮೂಡುಬಿದಿರೆಗೆ ಬಂದಿದ್ದಾರೆ.
800 ಮೀಟರ್ಸ್ ಓಡುತ್ತಿದ್ದ ಅವರು ಎರಡು ವರ್ಷಗಳ ಹಿಂದಷ್ಟೇ 5 ಸಾವಿರ ಮತ್ತು 10 ಸಾವಿರ ಮೀಟರ್ಸ್‌ಗೆ ಪದಾರ್ಪಣೆ ಮಾಡಿದ್ದರು. ಸೇನೆಯಲ್ಲಿರುವ ಪ್ರೀತಂ ಸಿಂಗ್ ಅವರು ಹಾಫ್ ಮ್ಯಾರಥಾನ್ ಓಟಗಾರ. ಅವರನ್ನು ನೋಡಿ ಬೆಳೆದ ನಿರ್ಮಲಾ ಅಣ್ಣನ ಬಳಿಯೇ ತರಬೇತಿಯನ್ನೂ ಪಡೆಯುತ್ತಿದ್ದಾರೆ.
‘800 ಮೀಟರ್ಸ್ ಓಟದಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆಗ ದೂರ ಅಂತರವನ್ನು ಆಯ್ದುಕೊಳ್ಳುವಂತೆ ಅಣ್ಣನೇ ಸಲಹೆ ನೀಡಿದ. ಇದರಲ್ಲಿ ಯಶಸ್ಸು ಕಾಣುತ್ತಿದ್ದೇನೆ. ಆಳ್ವಾಸ್ ಕಾಲೇಜಿನಲ್ಲಿ ಕ್ರೀಡಾ ಕೋಟಾದಡಿ ಅವಕಾಶ ಲಭಿಸಿದ್ದರಿಂದ ಅನುಕೂಲವಾಯಿತು’ ಎಂದು ನಿರ್ಮಲಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.