
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ
ಹಾಂಗ್‌ಝೌ: ಯಶಸ್ಸಿನ ಓಟ ಮುಂದುವರಿಸಿದ ಭಾರತದ ಅಗ್ರ ಡಬಲ್ಸ್ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಅವರು ಹಿನ್ನಡೆಯಿಂದ ಚೇತರಿಸಿ ತಮ್ಮ ಬದ್ಧ ಎದುರಾಳಿ ಆ್ಯರನ್ ಚಿಯಾ– ಸೊಹ್ ವೂಯಿ ಯಿಕ್ ಅವರನ್ನು ಸೋಲಿಸಿ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ವಿಶ್ವ ಟೂರ್ ಫೈನಲ್ಸ್‌ನಲ್ಲಿ ಶುಕ್ರವಾರ ನಾಕೌಟ್ ಹಂತಕ್ಕೆ ದಾಪುಗಾಲಿಟ್ಟರು.
‘ಬಿ’ ಗುಂಪಿನ ಈ ಕೊನೆಯ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಸಾತ್ವಿಕ್– ಚಿರಾಗ್ ಜೋಡಿ 17–21, 21–18, 21–15 ರಿಂದ ಮಲೇಷ್ಯಾ ಜೋಡಿಯ ಹೋರಾಟವನ್ನು ಬದಿಗೊತ್ತಿತು. 70 ನಿಮಿಷಗಳಲ್ಲಿ ಗೆಲ್ಲುವ ಮೂಲಕ ವರ್ಷಾಂತ್ಯದ ಈ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಸೆಮಿಫೈನಲ್ ತಲುಪಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆ ಇವರಿಬ್ಬರದಾಯಿತು. ಮಲೇಷ್ಯಾ ಆಟಗಾರರ ಎದುರು ಇವರಿಬ್ಬರ ಮುಖಾಮುಖಿ 5–11 ಆಗಿತ್ತು. ಈ ಪಂದ್ಯಕ್ಕಿಳಿಯುವ ಮೊದಲು ಒಂದು ಗೇಮ್ ಗೆದ್ದರೂ ಭಾರತದ ಜೋಡಿಗೆ ಸೆಮಿಫೈನಲ್ ಪ್ರವೇಶ ಖಾತರಿಯಾಗುತಿತ್ತು.
ವರ್ಷದ ಕೊನೆಯಲ್ಲಿ ನಡೆಯುವ ಈ ಟೂರ್ ಫೈನಲ್‌ನಲ್ಲಿ ಈ ಹಿಂದೆ ಭಾರತ ವಿರಳವಾಗಿ ಯಶಸ್ಸು ಗಳಿಸಿದೆ. ಪಿ.ವಿ.ಸಿಂಧು 2018ರಲ್ಲಿ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿದ್ದರು. ಸೈನಾ ನೆಹ್ವಾಲ್ 2011ರಲ್ಲಿ ಫೈನಲ್ ತಲುಪಿದ್ದರು. 2009ರಲ್ಲಿ ಜ್ವಾಲಾ ಗುಟ್ಟಾ– ವಿ.ಡಿಜು ಮಿಶ್ರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.