ಚೆನ್ನೈ: ಗ್ರ್ಯಾಂಡ್‌ಮಾಸ್ಟರ್ ಕಾರ್ತಿಕೇಯನ್ ಮುರಳಿ ಅವರು ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯ ಏಳನೇ ಸುತ್ತಿನ ತೀವ್ರ ಹೋರಾಟದ ಪಂದ್ಯದಲ್ಲಿ ತಮಗಿಂತ ಮೇಲಿನ ಕ್ರಮಾಂಕದ ವಿದಿತ್ ಗುಜರಾತಿ ಅವರನ್ನು ಸೋಲಿಸಿ ಗಮನ ಸೆಳೆದರು. ಅಮೆರಿಕದ ಅವಾಂಡರ್ ಲಿಯಾಂಗ್ ಅವರನ್ನು ಸೋಲಿಸಿದ ಜರ್ಮನಿಯ ವಿನ್ಸೆಂಟ್ ಕೀಮರ್ ತಮ್ಮ ಅಗ್ರಸ್ಥಾನ ಬಲಪಡಿಸಿಕೊಂಡರಲ್ಲದೇ, ಚೊಚ್ಚಲ ಪ್ರಶಸ್ತಿಗೆ ಹತ್ತಿರವಾದರು.
ಇನ್ನು ಎರಡು ಸುತ್ತಿನ ಪಂದ್ಯಗಳಷ್ಟೇ ಉಳಿದಿವೆ. ಕಪ್ಪು ಕಾಯಿಗಳಲ್ಲಿ ಆಡಿ ಗೆದ್ದ ಕೀಮರ್ ಈ ಗೆಲುವಿನ ಮೂಲಕ 5.5 ಅಂಕ ಸಂಗ್ರಹಿಸಿದ್ದಾರೆ. ಅಗ್ರ ಶ್ರೇಯಾಂಕದ ಅರ್ಜುನ್ ಇರಿಗೇಶಿ ಮತ್ತು ಕಾರ್ತಿಕೇಯನ್ ಮುರಳಿ ತಲಾ 4 ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಇರಿಗೇಶಿ ಏಳನೇ ಸುತ್ತಿನಲ್ಲಿ ಡಚ್ ಗ್ರ್ಯಾಂಡ್‌ಮಾಸ್ಟರ್ ಅನಿಶ್ ಗಿರಿ (3.5) ಜೊತೆ ಡ್ರಾ ಮಾಡಿಕೊಂಡರು. ಅಮೆರಿಕದ ರೇ ರಾಬ್ಸನ್ (2.5) ಅವರು ಭಾರತದ ನಿಹಾಲ್ ಸರಿನ್‌ಗೆ (3) ಮಣಿದರು. ಜೋರ್ಡನ್ ವಾನ್ ಫೋರಿಸ್ಟ್ (3.5) ಮತ್ತು ಭಾರತದ ವಿ.ಪ್ರಣವ್ (2.5) ನಡುವಣ ಪಂದ್ಯ ಡ್ರಾ ಆಯಿತು.
ಚಾಲೆಂಜರ್ ವಿಭಾಗದಲ್ಲಿ ಏಳನೇ ಸುತ್ತಿನ ನಂತರ ಎಂ.ಪ್ರಾಣೇಶ್ ಮತ್ತು ಲಿಯಾನ್ ಲ್ಯೂಕ್ ಮೆಂಡೋನ್ಸಾ ಅವರು ತಲಾ 5.5 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಅಭಿಮನ್ಯು ಪುರಾಣಿಕ್ (5) ಏಕಾಂಗಿಯಗಿ ಎರಡನೇ ಸ್ಥಾನದಲ್ಲಿದ್ದರೆ, ಅಧಿಬನ್ ಮತ್ತು ಇನಿಯನ್ (ತಲಾ 4) ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ದೀಪ್ತಾಯನ ಘೋಷ್ (3.5) ನಂತರದ ಸ್ಥಾನದಲ್ಲಿದ್ದಾರೆ.
ಮಾಸ್ಟರ್ಸ್ ಮತ್ತು ಚಾಲೆಂಜರ್ ವಿಭಾಗದಲ್ಲಿ ತಲಾ 10 ಆಟಗಾರರು ಕಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.