
ಪಣಜಿ: ಉಜ್ಬೇಕಿಸ್ತಾನದ ಗ್ರ್ಯಾಂಡ್‌ಮಾಸ್ಟರ್ ಜಾವೋಖಿರ್ ಸಿಂದರೋವ್ ಮತ್ತು ಚೀನಾದ ಗ್ರ್ಯಾಂಡ್‌ಮಾಸ್ಟರ್ ವೀ ಯಿ ಅವರು ತಮ್ಮ ಎದುರಾಳಿಗಳನ್ನು ಟೈಬ್ರೇಕರ್‌ನಲ್ಲಿ ಸೋಲಿಸಿ ಫಿಡೆ ಚೆಸ್ ವಿಶ್ವಕಪ್ ಟೂರ್ನಿಯ ಫೈನಲ್ ತಲುಪಿದರು. ಆ ಹಾದಿಯಲ್ಲಿ ಮುಂದಿನ ವರ್ಷದ ಕ್ಯಾಂಡಿಡೇಟ್ಸ್ ಟೂರ್ನಿಗೆ ಸ್ಥಾನ ಕಾದಿರಿಸಿದರು.
ಈ ಟೂರ್ನಿಯಿಂದ ಮೂವರು, ಸೈಪ್ರಸ್‌ನಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುತ್ತಾರೆ. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನೊದಿರ್ಬಕೆಕ್ ಯಾಕುಬೊಯೇವ್ ಮತ್ತು ಆ್ಯಂಡ್ರಿ ಇಸಿಪೆಂಕೊ ಆಡಲಿದ್ದು, ಈ ಪಂದ್ಯದ ವಿಜೇತರೂ ಅರ್ಹತೆ ಪಡೆಯುತ್ತಾರೆ.
ಸೋಮವಾರ ಫೈನಲ್ ಪಂದ್ಯದ ಮೊದಲ ಕ್ಲಾಸಿಕಲ್ ಆಟ ನಡೆಯಲಿದೆ.
ಜಾವೊಖಿರ್ ಸಿಂದರೋವ್ ಅವರು ಸೆಮಿಫೈನಲ್‌ನಲ್ಲಿ ಸ್ವದೇಶದ ಯಾಕುಬೊಯೇವ್ ಅವರನ್ನು 2.5–1.5 ರಿಂದ ಸೋಲಿಸಿದರು. ಇವರಿಬ್ಬರ ನಡುವಣ ಎರಡೂ ಕ್ಲಾಸಿಕಲ್ ಆಟಗಳು ಡ್ರಾ ಆಗಿದ್ದವು. ಭಾನುವಾರ ಕಾಲಮಿತಿಯ ಮೊದಲ ಟೈಬ್ರೇಕರಿನಲ್ಲಿ (ರ‍್ಯಾಪಿಡ್) ಸಿಂದರೋವ್ ಕಪ್ಪುಕಾಯಿಗಳಲ್ಲಿ ಆಡಿ 47 ನಡೆಗಳಲ್ಲಿ ಜಯಗಳಿಸಿದರು. ಮರು ಆಟದಲ್ಲಿ ಯಾಕುಬೊಯೇವ್ ಶ್ರಮ ಹಾಕಿದರೂ ಆಟ 54 ನಡೆಗಳಲ್ಲಿ ಡ್ರಾ ಆಗಿದ್ದರಿಂದ ಸಿಂದರೋವ್ ಫೈನಲ್ ತಲುಪಿದರು.
ಎರಡನೇ ಸೆಮಿಫೈನಲ್‌ನಲ್ಲಿ, ಕಣದಲ್ಲಿ ಉಳಿದಿರುವ ಅತ್ಯಧಿಕ ರ‍್ಯಾಂಕಿನ ಆಟಗಾರ ವೀ ಯಿ 2.5–1.5 ರಿಂದ ರಷ್ಯಾದ ಇಸಿಪೆಂಕೊ ಅವರನ್ನು ಮಣಿಸಿದರು. ಮೊದಲ ಟೈಬ್ರೇಕರ್ ಆಟ ಡ್ರಾ ಆಯಿತು, ಎರಡನೇ ಆಟದಲ್ಲಿ ಚೀನಾದ ಆಟಗಾರ ಬಿಳಿ ಕಾಯಿಗಳಲ್ಲಿ ಆಡಿ 57 ನಡೆಗಳಲ್ಲಿ ಜಯಗಳಿಸಿದರು.
‘ಇದು ನನ್ನ ಚೆಸ್ ಜೀವನದಲ್ಲಿ ಅತಿ ದೊಡ್ಡ ಸಾಧನೆ. ನನಗೆ ಸಂಸತವಾಗಿದೆ. ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೇ ಉತ್ತಮ ಆಟ ಆಡುವತ್ತ ಗಮನಹರಿಸಿದ್ದೆ’ ಎಂದು ವೀ ಯಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.