ADVERTISEMENT

Commonwealth Games 2022 ಹಾಕಿ: ಕಂಚಿನ ಪದಕ ಗೆದ್ದ ಭಾರತ ಮಹಿಳಾ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2022, 10:30 IST
Last Updated 7 ಆಗಸ್ಟ್ 2022, 10:30 IST
   

ಬರ್ಮಿಂಗ್‌ಹ್ಯಾಂ: ಹಾಲಿ ಚಾಂಪಿಯನ್‌ ನ್ಯೂಜಿಲೆಂಡ್‌ ತಂಡವನ್ನು ಮಣಿಸಿದ ಭಾರತದ ವನಿತೆಯರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಹಾಕಿ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಉಭಯ ತಂಡಗಳು ಭಾನುವಾರ ನಡೆದ ಪಂದ್ಯದಪೂರ್ಣಾವಧಿಯಲ್ಲಿ 1–1 ಅಂತರದ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶ ನಿರ್ಣಯಕ್ಕಾಗಿ ಪೆನಾಲ್ಟಿ ಶೂಟೌಟ್‌ ಮೊರೆಹೋಗಲಾಯಿತು.ಈ ಸೆಣಸಾಟದಲ್ಲಿ ಭಾರತ ತಂಡ 2–1 ಅಂತರದಿಂದ ಮುನ್ನಡೆ ಸಾಧಿಸಿ, ಜಯದ ನಗೆ ಬೀರಿತು.

ಭಾರತ ಹಾಗೂ ನ್ಯೂಜಿಲೆಂಡ್‌, ಸೆಮಿಫೈನಲ್‌ ಪಂದ್ಯಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ವಿರುದ್ಧ ಸೋಲು ಕಂಡಿದ್ದವು. ಹೀಗಾಗಿ ಇಂದು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಿದವು.

ADVERTISEMENT

ಪೆನಾಲ್ಟಿ ಶೂಟೌಟ್‌ನಲ್ಲಿ ಪರಾಭವಗೊಂಡಿದ್ದ ಭಾರತ
ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು ಭಾರತ 1–1 ಅಂತರದ ಡ್ರಾ ಸಾಧಿಸಿತ್ತು. ಆದರೆ, ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ 3–0 ಅಂತರದಿಂದ ಸೋಲೊಪ್ಪಿಕೊಂಡಿತ್ತು.

ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾದ ರೋಸಿ ಮಲೊನ್‌ ಅವರು ಮೊದಲ ಪ್ರಯತ್ನದಲ್ಲಿ ಗೋಲು ಗಳಿಸಲು ವಿಫಲರಾಗಿದ್ದರು. ನಂತರ ಭಾರತದ ಲಾಲ್‌ರೆಮ್ಸಿಯಾಮಿ ಪೆನಾಲ್ಟಿ ಶೂಟೌಟ್‌ಗೆ ಮುಂದಾದರು.

ಈ ವೇಳೆ ಮಧ್ಯ ಪ್ರವೇಶಿಸಿದ ರೆಫರಿ, ಮಲೊನ್ ಶೂಟೌಟ್‌ ವೇಳೆ ಕ್ಲಾಕ್‌ನಲ್ಲಿ (ಟೈಮರ್‌) ಕೌಂಟ್‌ಡೌನ್‌ ಆರಂಭವಾಗಿರಲಿಲ್ಲ ಎಂದು ಮತ್ತೊಂದು ಅವಕಾಶ ನೀಡಿದರು. ಆ ಅವಕಾಶದಲ್ಲಿ ಮಲೊನ್‌ ಗೋಲು ಗಳಿಸಿದರು.

ನಂತರದ ಎರಡು ಅವಕಾಶಗಳಲ್ಲಿಯೂ ಗೋಲು ಬಾರಿಸಿದ ಆಸ್ಟ್ರೇಲಿಯನ್ನರು 3–0 ಅಂತರದ ಮುನ್ನಡೆ ಸಾಧಿಸಿದರು.

ಟೈಮರ್‌ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಭಾರತದ ಆಟಗಾರ್ತಿಯರ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು, ಪಂದ್ಯದ ರೆಫ್ರಿ, ಆಯೋಜಕರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.