ADVERTISEMENT

ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನದ ಚುನಾವಣೆಗೆ ಟಿರ್ಕೆ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 12:25 IST
Last Updated 18 ಸೆಪ್ಟೆಂಬರ್ 2022, 12:25 IST
ದಿಲೀಪ್‌ ಟಿರ್ಕೆ –ಟ್ವಿಟರ್‌ ಚಿತ್ರ
ದಿಲೀಪ್‌ ಟಿರ್ಕೆ –ಟ್ವಿಟರ್‌ ಚಿತ್ರ   

ನವದೆಹಲಿ: ಭಾರತ ಹಾಕಿ ತಂಡದ ಮಾಜಿ ನಾಯಕ, ಒಲಿಂಪಿಯನ್‌ ದಿಲೀಪ್‌ ಟಿರ್ಕೆ ಅವರು ಹಾಕಿ ಇಂಡಿಯಾ (ಎಚ್‌ಐ) ಅಧ್ಯಕ್ಷ ಸ್ಥಾನದ ಚುನಾವಣೆಗೆ ಭಾನುವಾರ ನಾಮಪತ್ರ ಸಲ್ಲಿಸಿದರು.

ಹಾಕಿ ಇಂಡಿಯಾ ಚುನಾವಣೆ ಅ.1 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಭಾನುವಾರ ಕೊನೆಯ ದಿನವಾಗಿತ್ತು.

‘ನಾನು ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಒಡಿಶಾ ಹಾಕಿ ಸಂಸ್ಥೆಯ ಪ್ರತಿನಿಧಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಟಿರ್ಕೆ ಅವರು ಒಡಿಶಾ ಹಾಕಿ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

ADVERTISEMENT

‘ಹಾಕಿ ನನಗೆ ಎಲ್ಲವನ್ನೂ ನೀಡಿದೆ. ಒಬ್ಬ ಆಟಗಾರನಾಗಿ ರಾಷ್ಟ್ರೀಯ ತಂಡಕ್ಕೆ ಹಲವು ಪಂದ್ಯಗಳನ್ನು ಆಡಿದ್ದೇನೆ. ನಿವೃತ್ತಿಯ ಬಳಿಕ ಒಡಿಶಾದಲ್ಲಿ ಹಾಕಿ ಕ್ರೀಡೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದೇನೆ. ಎಚ್‌ಐ ಅಧ್ಯಕ್ಷನಾದರೆ, ರಾಷ್ಟ್ರಮಟ್ಟದಲ್ಲಿ ಹಾಕಿ ಕ್ರೀಡೆಯ ಬೆಳವಣಿಗೆಗೆ ಕೊಡುಗೆ ನೀಡಬಹುದು. ಆದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ’ ಎಂದಿದ್ದಾರೆ.

ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಟಿರ್ಕೆ, ‘ವಿವಿಧ ರಾಜ್ಯಗಳ ಹಾಕಿ ಸಂಸ್ಥೆಗಳ ಪ್ರತಿನಿಧಿಗಳ ಜತೆ ಮಾತನಾಡಿದ್ದೇನೆ. ಈಶಾನ್ಯದ ಎಲ್ಲ ರಾಜ್ಯಗಳೂ ನನ್ನ ಪರವಾಗಿವೆ. ಬಂಗಾಳ, ಅಸ್ಸಾಂ, ಮಿಜೋರಾಂ, ಅರುಣಾಚಲ ಪ್ರದೇಶ, ತ್ರಿಪುರಾ ರಾಜ್ಯಗಳು ಬೆಂಬಲ ಸೂಚಿಸಿವೆ. ಕೇರಳ, ತಮಿಳುನಾಡು ಮತ್ತು ರಾಜಸ್ತಾನ ಕೂಡಾ ಬೆಂಬಲದ ಭರವಸೆ ನೀಡಿವೆ’ ಎಂದು ಹೇಳಿದ್ದಾರೆ.

44 ವರ್ಷದ ಟಿರ್ಕೆ ಅವರು 1998ರ ಬ್ಯಾಂಕಾಕ್‌ ಮತ್ತು 2012ರ ಬೂಸಾನ್‌ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದ್ದ ಭಾರತ ತಂಡದ ಸದಸ್ಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.