ADVERTISEMENT

ಚೆಸ್ ಟೂರ್ನಿ| ಕೇರಳದ ಮಾರ್ತಾಂಡನ್‌ ಚಾಂಪಿಯನ್; ಕರ್ನಾಟಕದ ಇಶಾನ್ ರನ್ನರ್ ಅಪ್

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 14:34 IST
Last Updated 30 ಡಿಸೆಂಬರ್ 2025, 14:34 IST
ಪ್ರಶಸ್ತಿ ಗೆದ್ದ ಮಾರ್ತಾಂಡನ್ (ಮಧ್ಯೆ), ರನ್ನರ್ ಅಪ್‌ ಇಶಾನ್ ಭನ್ಸಾಲಿ (ಎಡ) ಮತ್ತು 3ನೇ ಸ್ಥಾನ ಗಳಿಸಿದ ಜೋಶುವಾ ಮಾರ್ಕ್ ಟೆಲಿಸ್‌ 
ಪ್ರಶಸ್ತಿ ಗೆದ್ದ ಮಾರ್ತಾಂಡನ್ (ಮಧ್ಯೆ), ರನ್ನರ್ ಅಪ್‌ ಇಶಾನ್ ಭನ್ಸಾಲಿ (ಎಡ) ಮತ್ತು 3ನೇ ಸ್ಥಾನ ಗಳಿಸಿದ ಜೋಶುವಾ ಮಾರ್ಕ್ ಟೆಲಿಸ್‌    

ಮಂಗಳೂರು: ಮೂರು ಮತ್ತು ನಾಲ್ಕನೇ ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದರೂ ಚೇತರಿಸಿಕೊಂಡು ಮುನ್ನಡೆದ ಅಗ್ರ ಶ್ರೇಯಾಂಕಿತ, ಕೇರಳದ ಮಾರ್ತಾಂಡನ್ ಕೆ.ಯು ರಾಷ್ಟ್ರಮಟ್ಟದ ಫಿಡೆ ರೇಟೆಡ್ ಚೆಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು.

ದಕ್ಷಿಣ ಕನ್ನಡ ಚೆಸ್ ಸಂಸ್ಥೆ ಇಲ್ಲಿನ ಕರ್ನಾಟಕ ತುಳು ಅಕಾಡೆಮಿಯಲ್ಲಿ ಆಯೋಜಸಿದ್ದ ಟೂರ್ನಿಯ ಕೊನೆಯ ಹಾಗೂ ಒಂಬತ್ತನೇ ಸುತ್ತಿನಲ್ಲಿ ಮಂಗಳವಾರ ಜಯ ಗಳಿಸುವ ಮೂಲಕ ಮಾರ್ತಾಂಡನ್ 7.5 ಪಾಯಿಂಟ್ ಕಲೆ ಹಾಕಿದರು. 

ಕರ್ನಾಟಕದ ಇಶಾನ್ ಭನ್ಸಾಲಿ, ಗೋವಾದ ಜೋಶುವಾ ಮಾರ್ಕ್ ಟೆಲಿಸ್‌, ಕೇರಳದ ವೈಷ್ಣವ್ ಮತ್ತು ಅಜೀಶ್ ಆ್ಯಂಟನಿ, ಕರ್ನಾಟಕದ ಗವಿಸಿದ್ದಯ್ಯ, ಗುಜರಾತ್‌ನ ಅಡಲ್ಜ ವಂಶ್‌, ತಮಿಳುನಾಡಿನ ವಿಘ್ನೇಶ್ವರನ್‌ ಮತ್ತು ಕರ್ನಾಟಕದ ಲಕ್ಷಿತ್ ಸಾಲಿಯಾನ್ ತಲಾ 7 ಪಾಯಿಂಟ್‌ಗಳನ್ನು ಗಳಿಸಿದರು. ಉತ್ತಮ ಟೈಬ್ರೇಕರ್ ಆಧಾರದಲ್ಲಿ ಇಶಾನ್‌ ರನ್ನರ್ ಅಪ್ ಆದರೆ ಜೋಶುವಾ ಮೂರನೇ ಸ್ಥಾನ ಗಳಿಸಿದರು. 

ADVERTISEMENT

ಎರಡನೇ ಶ್ರೇಯಾಂಕಿತ, ಇಂಟರ್‌ನ್ಯಾಷನಲ್ ಮಾಸ್ಟರ್ ತಮಿಳುನಾಡಿನ ಬಾಲಸುಬ್ರಹ್ಮಣ್ಯಂ ರಾಮನಾಥನ್ ಮತ್ತು ಮೂರನೇ ಶ್ರೇಯಾಂಕಿತ ತಮಿಳುನಾಡಿನ ಪ್ರಸನ್ನ ಕಾರ್ತಿಕ್ 6.5 ಪಾಯಿಂಟ್‌ಗಳೊಂದಿಗೆ ಕ್ರಮವಾಗಿ 11 ಮತ್ತು 12ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಇವರಿಬ್ಬರೊಂದಿಗೆ ಒಟ್ಟು 13 ಮಂದಿ 6.5 ಪಾಯಿಂಟ್‌ ಗಳಿಸಿದರು. 

ಭಾನುವಾರ 7 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಏಕೈಕ ಆಟಗಾರ ಇಶಾನ್‌ ಕೊನೆಯ ಸುತ್ತಿನಲ್ಲಿ ಮಾರ್ತಾಂಡನ್ ಎದುರು ಆಡಿದರು. ಪಂದ್ಯವನ್ನು ಗೆದ್ದು ಮಾರ್ತಾಂಡನ್‌ ಟ್ರೋಫಿ ಮತ್ತು ₹ 50 ಸಾವಿರ ನಗದು ತಮ್ಮದಾಗಿಸಿಕೊಂಡರು. ಟೂರ್ನಿಯಲ್ಲಿ ಒಟ್ಟು ₹ 6 ಲಕ್ಷ ಬಹುಮಾನ ಮೊತ್ತವಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.