ADVERTISEMENT

ಪಾಕ್‌ ಸವಾಲು ಮೆಟ್ಟಿ ನಿಂತ ಜರ್ಮನಿ

ಪಿಟಿಐ
Published 1 ಡಿಸೆಂಬರ್ 2018, 20:00 IST
Last Updated 1 ಡಿಸೆಂಬರ್ 2018, 20:00 IST
ಜರ್ಮನಿ (ಎಡ) ಮತ್ತು ಪಾಕಿಸ್ತಾನದ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ ಸಂದರ್ಭ –ಎಫ್ಐಎಚ್ ವೆಬ್‌ಸೈಟ್ ಚಿತ್ರ
ಜರ್ಮನಿ (ಎಡ) ಮತ್ತು ಪಾಕಿಸ್ತಾನದ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ ಸಂದರ್ಭ –ಎಫ್ಐಎಚ್ ವೆಬ್‌ಸೈಟ್ ಚಿತ್ರ   

ಭುವನೇಶ್ವರ: ಪಾಕಿಸ್ತಾನದ ಪ್ರಬಲ ಪೈಪೋಟಿ ಮೆಟ್ಟಿ ನಿಂತ ಜರ್ಮನಿ ತಂಡ ವಿಶ್ವಕಪ್ ಹಾಕಿ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಜಯ ಗಳಿಸಿತು. ಕಳಿಂಗ ಕ್ರೀಡಾಂಗಣದಲ್ಲಿ ರಾತ್ರಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ 0–1ರಿಂದ ಸೋಲಿಗೆ ಶರಣಾಯಿತು. ಮಿಲ್ತಾಕವ್‌ ಮಾರ್ಸೊ ಅವರು ಪಂದ್ಯದ ಏಕೈಕ ಗೋಲು ಗಳಿಸಿ ಮಿಂಚಿದರು.

ವಿಶ್ವಕಪ್‌ನಲ್ಲಿ ಈ ಹಿಂದೆ ಎರಡು ಬಾರಿ ಸೆಣಸಿದ್ದ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದು ಸಮಬಲ ಸಾಧಿಸಿದ್ದವು. ಇತ್ತೀಚಿನ ನಾಲ್ಕು ಪಂದ್ಯಗಳ ಪೈಕಿ ಜರ್ಮನಿ ಮೂರು ಬಾರಿ ಗೆದ್ದಿದ್ದರೆ ಪಾಕಿಸ್ತಾನ ಒಮ್ಮೆ ಮಾತ್ರ ಗೆಲುವು ಸಾಧಿಸಿತ್ತು. ಜರ್ಮನಿ 15 ಗೋಲು ಗಳಿಸಿದ್ದು ಪಾಕಿಸ್ತಾನಕ್ಕೆ ಒಂಬತ್ತು ಬಾರಿ ಮಾತ್ರ ಚೆಂಡನ್ನು ಗುರಿ ಸೇರಿಸಲು ಸಾಧ್ಯವಾಗಿತ್ತು.

ಶನಿವಾರದ ಪಂದ್ಯದ ಆರಂಭದಲ್ಲೇ ಜರ್ಮನಿ ಆಕ್ರಮಣ ನಡೆಸಿತು. ಚೆಂಡಿನ ಮೇಲೆ ಹೆಚ್ಚು ಕಾಲ ನಿಯಂತ್ರಣ ಸಾಧಿಸುವಲ್ಲಿ ತಂಡ ಯಶಸ್ವಿಯಾಯಿತು. ಆದರೆ ಪಾಕಿಸ್ತಾನದ ರಕ್ಷಣಾ ವಿಭಾಗದ ಗೋಡೆಯನ್ನು ಕೆಡವಿ ಗೋಲು ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ.

ADVERTISEMENT

ಎರಡನೇ ಕ್ವಾರ್ಟರ್‌ನಲ್ಲೂ ಜರ್ಮನಿಯ ಪ್ರಾಬಲ್ಯ ಮುಂದುವರಿಯಿತು. ಆದರೆ ಗೋಲು ಗಳಿಸುವ ಆಸೆ ಕೈಗೂಡಲಿಲ್ಲ. ಎರಡು ಬಾರಿ ಪಾಕಿಸ್ತಾನದ ಆವರಣಕ್ಕೆ ನುಗ್ಗಿದ ತಂಡ ನಿರಾಸೆಗೆ ಒಳಗಾಯಿತು. ನಾಲ್ಕು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದರೂ ಚೆಂಡು ಗುರಿ ಸೇರಲು ಪಾಕ್‌ ತಂಡದವರು ಬಿಡಲಿಲ್ಲ.

ಫಲ ಕಂಡ ಜರ್ಮನಿ: ಮೂರನೇ ಕ್ವಾರ್ಟರ್‌ನಲ್ಲಿ ಜರ್ಮನಿ ಫಲ ಕಂಡಿತು. 36ನೇ ನಿಮಿಷದಲ್ಲಿ ಮಿಲ್ತಾಕವ್‌ ಮಾರ್ಸೊ ಗಳಿಸಿದ ಗೋಲಿನ ಮೂಲಕ ತಂಡ ಮನ್ನಡೆ ಸಾಧಿಸಿತು. 0–1 ಹಿನ್ನಡೆಯಿಂದಾಗಿ ಒತ್ತಡದಲ್ಲಿ ಕೊನೆಯ ಕ್ವಾರ್ಟರ್‌ನಲ್ಲಿ ಆಡಲಿಳಿದ ಪಾಕಿಸ್ತಾನ ಎದುರಾಳಿ ತಂಡಕ್ಕೆ ಭಾರಿ ಪೈಪೋಟಿ ಒಡ್ಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.