ADVERTISEMENT

ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲ್‌ಸನ್‌‍ಗೆ ಮಣಿದ ಗುಕೇಶ್, ಆದರೂ ನಾಕೌಟ್ ಪ್ರವೇಶ

ಪಿಟಿಐ
Published 9 ಫೆಬ್ರುವರಿ 2025, 4:16 IST
Last Updated 9 ಫೆಬ್ರುವರಿ 2025, 4:16 IST
<div class="paragraphs"><p>ಡಿ. ಗುಕೇಶ್, ಮ್ಯಾಗ್ನಸ್ ಕಾರ್ಲ್‌ಸನ್</p></div>

ಡಿ. ಗುಕೇಶ್, ಮ್ಯಾಗ್ನಸ್ ಕಾರ್ಲ್‌ಸನ್

   

(ಚಿತ್ರ ಕೃಪೆ: X/@chess24com)

ಹ್ಯಾಂಬರ್ಗ್ (ಜರ್ಮನಿ): ಫ್ರೀಸ್ಟೈಲ್ ಗ್ರ್ಯಾಂಡ್ ಸ್ಲಾಮ್ ಟೂರ್ ಚೆಸ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್, ಭಾರತದ ಡಿ. ಗುಕೇಶ್ ಅವರು ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರ ವಿರುದ್ಧ ಸೋಲು ಅನುಭವಿಸಿದ್ದಾರೆ.

ADVERTISEMENT

ಈ ಸೋಲಿನ ಹೊರತಾಗಿಯೂ ಫ್ರೀಸ್ಟೈಲ್ ಗ್ರ್ಯಾಂಡ್ ಸ್ಲಾಮ್ ಟೂರ್‌ನಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸುವಲ್ಲಿ ಗುಕೇಶ್ ಯಶಸ್ವಿಯಾಗಿದ್ದಾರೆ.

ಅರ್ಹತಾ ಸುತ್ತಿನ ಒಂಬತ್ತನೇ ಹಾಗೂ ಅಂತಿಮ ಸುತ್ತಿನಲ್ಲಿ ಕಾರ್ಲ್‌ಸನ್ ಅವರಿಗೆ ಗುಕೇಶ್ ಮಣಿದರು.

ಇದರೊಂದಿಗೆ ಗುಕೇಶ್ ಒಟ್ಟು 3.5 ಅಂಕಗಳನ್ನು ಗಳಿಸಿದರು. ಆದಾಗ್ಯೂ, 10 ಆಟಗಾರರ ಟೂರ್ನಿಯಲ್ಲಿ ಎಂಟನೇ ಸ್ಥಾನ ಗಳಿಸಿರುವ ಗುಕೇಶ್, ನಾಕೌಟ್ ಹಂತಕ್ಕೆ ಮುನ್ನಡೆದಿದ್ದಾರೆ. ಆದರೆ ಒಂದೇ ಒಂದು ಜಯ ಗಳಿಸಲು ಸಾಧ್ಯವಾಗಲಿಲ್ಲ. ಏಳು ಪಂದ್ಯಗಳಲ್ಲಿ ಡ್ರಾ ಮತ್ತು ಎರಡರಲ್ಲಿ ಸೋಲನುಭವಿಸಿದ್ದಾರೆ.

ಫ್ರೀಸ್ಟೈಲ್ ಟೂರ್ನಿಯು ಅತ್ಯಂತ ಕಠಿಣ ಚೆಸ್ ಟೂರ್ನಿಗಳಲ್ಲಿ ಒಂದಾಗಿದೆ.

ಐದು ಬಾರಿಯ ವಿಶ್ವ ಚಾಂಪಿಯನ್ ಕಾರ್ಲ್‌ಸನ್ ವಿರುದ್ಧ ಬಿಳಿಕಾಯಿಗಳೊಂದಿಗೆ ಆಡಿದ ಗುಕೇಶ್ ಅವರಿಗೆ ಡ್ರಾ ಮಾಡುವ ಸಾಕಷ್ಟು ಅವಕಾಶಗಳಿದ್ದವು. ಆದರೆ ಜಯಕ್ಕಾಗಿ ಹೋರಾಟ ನಡೆಸಿದರು. ಅಂತಿಮವಾಗಿ ಸೋಲಿಗೆ ಶರಣಾದರು.

5.5 ಅಂಕಗಳೊಂದಿಗೆ ಕಾರ್ಲ್‌ಸನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೊನೆಯ ಐದು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಒಂದು ಡ್ರಾ ಫಲಿತಾಂಶ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫ್ರಾನ್ಸ್‌ನ ಗ್ರ್ಯಾಂಡ್ ಮಾಸ್ಟರ್ ಅಲಿರೆಜಾ ಫಿರೋಜಾ ಮತ್ತು ಉಜ್ಬೇಕಿಸ್ತಾನದ ಜಾವೋಖಿರ್ ಸಿಂಡರೋವ್ 6.5 ಅಂಕಗಳೊದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಕಾರ್ಲ್‌ಸನ್, 'ಗುಕೇಶ್ ಏಳು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ. ಕೆಲವನ್ನು ಸೋತಿದ್ದಾರೆ. ಅವರ ಆಟವನ್ನು ಅಧ್ಯಯನ ಮಾಡಬೇಕಿದೆ' ಎಂದು ಹೇಳಿದ್ದಾರೆ.

ಈ ಟೂರ್ನಿಯಲ್ಲಿ ಪ್ರಶಸ್ತಿ ಮೊತ್ತ 7.5 ಲಕ್ಷ ಅಮೆರಿಕನ್ ಡಾಲರ್ ಆಗಿದೆ. ಗ್ರ್ಯಾಂಡ್ ಸ್ಲಾಮ್‌ನ ಒಟ್ಟಾರೆ ವಿಜೇತರಿಗೆ 1.5 ಲಕ್ಷ ಅಮೆರಿಕನ್ ಡಾಲರ್ ಬೋನಸ್ ಸಹ ಸಿಗಲಿದೆ.

ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜು, 18ನೇ ಹರೆಯದಲ್ಲೇ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದು ದಾಖಲೆ ಬರೆದಿದ್ದರು. ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಅತಿ ಕಿರಿಯ ಆಟಗಾರ ಎನಿಸಿದ್ದರು.

ಐದು ಬಾರಿಯ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ವಿಶ್ವ ಚಾಂಪಿಯನ್ ಆದ ಭಾರತದ ಎರಡನೇ ಆಟಗಾರ ಎನಿಸಿದ್ದರು.

ಇತ್ತೀಚೆಗೆ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್‌ನಲ್ಲಿ ಗುಕೇಶ್ ಅವರನ್ನು ಮಣಿಸಿದ್ದ ಭಾರತದವರೇ ಆದ ಪ್ರಜ್ಞಾನಂದ ಚಾಂಪಿಯನ್ ಪಟ್ಟ ಮುಡಿಗೇರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.