ಟೋಕಿಯೊ: ಎದುರಾಳಿಗಳ ಜೊತೆಗೆ ಸುಡುಬಿಸಿಲಿನ ಸವಾಲನ್ನೂ ಹಿಮ್ಮೆಟ್ಟಿಸಿದ ಫ್ಲೋರಿಯನ್ ವೆಲ್‌ಬ್ರಾಕ್ ಒಲಿಂಪಿಕ್ಸ್ ಮ್ಯಾರಥಾನ್ ಈಜು ಸ್ಪರ್ಧೆಯ 10 ಕಿ.ಮೀ. ವಿಭಾಗದಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.
ಒಡೈಬಾ ಮರೀನ್ ಪಾರ್ಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಜರ್ಮನಿಯ ಈಜುಪಟು ಒಂದು ತಾಸು 48 ನಿಮಿಷ, 33.7 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅವರಿಗಿಂತ 25 ಸೆಕೆಂಡು ಹೆಚ್ಚಿಗೆ ಸಮಯ ತೆಗೆದುಕೊಂಡ ಹಂಗರಿಯ ಕ್ರಿಸ್ಟೊಫ್ ರಾಸೊವಸ್ಕಿ ಬೆಳ್ಳಿ ಪದಕ ಗೆದ್ದುಕೊಂಡರೆ, ಇಟಲಿಯ ಗ್ರೆಗೊರಿಯೊ ಪಾಲ್ಟ್ರಿನೆರಿ ಕಂಚಿನ ಪದಕಕ್ಕೆ ಮುತ್ತಿಟ್ಟರು.
ಇದೇ ಕೂಟದಲ್ಲಿ ವೆಲ್‌ಬ್ರಾಕ್ 1500 ಮೀ. ಫ್ರೀಸ್ಟೈಲ್‌ನಲ್ಲಿ ಕಂಚು ಗೆದ್ದುಕೊಂಡಿದ್ದರೆ, ಪಾಲ್ಟ್ರಿನೆರಿ 800 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಇದರೊಂದಿಗೆ ಇವರಿಬ್ಬರೂ ಒಂದೇ ಒಲಿಂಪಿಕ್ಸ್‌ನ ಈಜು ಮತ್ತು ಮ್ಯಾರಥಾನ್ ಈಜು ವಿಭಾಗದಲ್ಲಿ ಪದಕ ಗೆದ್ದುಕೊಂಡ ಸಾಧನೆ ಮಾಡಿದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಟ್ಯುನಿಷಿಯಾದ ಒಸಾಮ ಮೆಲೌಲಿ ಅವರಿಂದ ಇಂತಹ ಸಾಧನೆ ಮೂಡಿಬಂದಿತ್ತು.
‘ಮೊದಲ ಏಳು ಕಿ.ಮೀ. ಈಜು ತುಂಬ ಸರಳವಾಗಿತ್ತು. ಆದರೆ ಕೊನೆಯ ಸುತ್ತಿನಲ್ಲಿ ತಾಪಮಾನ ಅಧಿಕವಾಗಿತ್ತು‘ ಎಂದು ವೆಲ್‌ಬ್ರಾಕ್ ಪ್ರತಿಕ್ರಿಯಿಸಿದರು.
ಬೆಳಗಿನ 6.30ಕ್ಕೆ ಸ್ಪರ್ಧೆ ಆರಂಭವಾದಾಗ ಈಜಕೊಳದ ನೀರಿನ ಉಷ್ಣಾಂಶವೂ 29 ಡಿಗ್ರಿ ಸೆಲ್ಸಿಯಸ್ ಇತ್ತು. ಸಮಯ ಕಳೆದಂತೆ ಇನ್ನೂ ಅಧಿಕವಾಗಿತ್ತು.
ಸ್ಪರ್ಧಿ | ದೇಶ | ಸಮಯ |
ಫ್ಲೋರಿಯನ್ ವೆಲ್‌ಬ್ರಾಕ್ | ಜರ್ಮನಿ | 1 ತಾಸು, 48 ನಿ, 33.7 ಸೆ. |
ಕ್ರಿಸ್ಟೊಫ್ ರಸೊವಸ್ಕಿ | ಹಂಗರಿ | 1 ತಾಸು 48 ನಿ.59 ಸೆ. |
ಗ್ರೆಗರಿಯೊ ಪಾಲ್ಟ್ರಿನೆರಿ | ಇಟಲಿ | 1 ತಾಸು, 49 ನಿ, 01.1 ಸೆ. |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.