
ಮುಂಬೈ: ಆತ್ಮವಿಶ್ವಾಸದಲ್ಲಿರುವ ಅಪ್‌ಗ್ರಾಡ್ ಮುಂಬಾ ಮಾಸ್ಟರ್ಸ್ ತಂಡ, ಗ್ಲೋಬಲ್ ಚೆಸ್ ಲೀಗ್‌ನಲ್ಲಿ ಸೋಮವಾರ ಅಮೋಘ ಪ್ರದರ್ಶನ ನೀಡಿ ಫೈಯರ್ಸ್ ಅಮೆರಿಕನ್ ಗ್ಯಾಂಬಿಟ್ಸ್ ತಂಡವನ್ನು 9–7 ರಿಂದ ಸೋಲಿಸಿತು. ಎರಡನೇ ಗೆಲುವಿನೊಡನೆ, ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ನೇತೃತ್ವದ ಮುಂಬಾ ಮಾಸ್ಟರ್ಸ್ ತಂಡ ಅಗ್ರಸ್ಥಾನಕ್ಕೇರಿತು.
ಗ್ಯಾಂಜೆಸ್ ಗ್ರ್ಯಾಂಡ್‌ಮಾಸ್ಟರ್ಸ್ ತಂಡವೂ ಹಿನ್ನಡೆಯಿಂದ ಚೇತರಿಸಿಕೊಂಡು ಅಲ್ಪೈನ್ ಎಸ್‌ಜಿ ಪೈಪರ್ಸ್ ತಂಡವನ್ನು 13–7 ರಿಂದ ಸೋಲಿಸಿತು. ಇದು ಜಿಸಿಎಲ್ ಮೂರನೇ ಆವೃತ್ತಿಯಲ್ಲಿ ಗ್ಯಾಂಜೆಸ್ ತಂಡಕ್ಕೆ ಮೊದಲ ಜಯ.
ಆರಂಭದಲ್ಲಿ ಸ್ವಲ್ಪ ಒತ್ತಡ ಅನುಭವಿಸಿದ ಮುಂಬಾ ಮಾಸ್ಟರ್ಸ್ ತಂಡ ಕ್ರಮೇಣ ಚೇತರಿಸಿಕೊಂಡಿತು. ಅಮೆರಿಕದ ವೆಸ್ಲಿ ಸೊ ಅವರು ಗ್ಯಾಂಬಿಟ್ಸ್ ತಂಡದ ವ್ಲಾದಿಮಿರ್ ಆರ್ಟೆಮೀವ್ ಜೊತೆ ಡ್ರಾ ಮಾಡಿಕೊಂಡರು. ಕೋನೇರು ಹಂಪಿ ಸಹ ತಮ್ಮ ಪಂದ್ಯ ಡ್ರಾ ಮಾಡಿಕೊಂಡಾಗ ಸ್ಕೋರ್ 2–2 ಆಗಿತ್ತು. ಆದರೆ ಶಕ್ರಿಯಾರ್ ಮೆಮೆದ್ಯರೋವ್, ನಿಧಾನವಾಗಿ ವ್ಯೂಹರಚಿಸಿ ರಿಚರ್ಡ್ ರ‍್ಯಾಪೋರ್ಟ್ ಅವರನ್ನು ಸೋಲಿಸಿ ಮುಂಬೈ ತಂಡಕ್ಕೆ 5–2 ಮುನ್ನಡೆ ಒದಗಿಸಿದರು.
ಇರಾನ್ ಆಟಗಾರ ಬದ್ರಿಯಾ ದಾನೇಶ್ವರ್ ಅವರು ಹಾಲಿ ವಿಶ್ವ ರ್‍ಯಾಪಿಡ್ ಚಾಂಪಿಯನ್ ವೊಲೊಡರ್ ಮುರ್ಝಿನ್ ಅವರನ್ನು ಅಚ್ಚರಿಯ ಸೋಲುಣಿಸುವ ಮೂಲಕ ಪಂದ್ಯದಲ್ಲಿ ಮುಂಬೈ ನಿರ್ಣಾಯಕ ಮೇಲುಗೈ ಪಡೆಯಲು ಕಾರಣರಾದರು. ನಂತರ ಗ್ಯಾಂಬಿಟ್ಸ್ ತಂಡದ ಥಿಯೊಡ್ರ ಇಂಜಾಕ್ ಅವರು ದ್ರೋಣವಲ್ಲಿ ಹಾರಿಕ ಅವರ ಜೊತೆ ಡ್ರಾ ಮಾಡಿಕೊಂಡರು. ಹಿಕಾರು ನಕಾಮುರಾ ಅವರು ಮ್ಯಾಕ್ಸಿಂ ಲಗ್ರಾವ್ ಮೇಲೆ ಜಯಗಳಿಸಿದರೂ, ತಂಡ ಒಟ್ಟಾರೆ ಎರಡು ಪಾಯಿಂಟ್ ಹಿನ್ನಡೆ ಅನುಭವಿಸಿತು. ಮೆಮೆದ್ಯರೋವ್ ಪಂದ್ಯದ ಆಟಗಾರ ಎನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.