ADVERTISEMENT

World Boxing Championships: ವಿಶ್ವ ಬಾಕ್ಸಿಂಗ್: ಭಾರತಕ್ಕೆ ‘ಚಿನ್ನ ಡಬಲ್’

ಜೈಸ್ಮಿನ್, ಮೀನಾಕ್ಷಿ ಚಾರಿತ್ರಿಕ ಸಾಧನೆ l ನೂಪುರ್‌ಗೆ ಬೆಳ್ಳಿ, ಪೂಜಾಗೆ ಕಂಚು

ಪಿಟಿಐ
Published 14 ಸೆಪ್ಟೆಂಬರ್ 2025, 13:14 IST
Last Updated 14 ಸೆಪ್ಟೆಂಬರ್ 2025, 13:14 IST
<div class="paragraphs"><p>ಮೀನಾಕ್ಷಿ ಹೂಡಾ</p></div>

ಮೀನಾಕ್ಷಿ ಹೂಡಾ

   

ಲಿವರ್‌ಪೂಲ್: ಜೈಸ್ಮಿನ್ ಲಾಂಬೊರಿಯಾ (57ಕೆ.ಜಿ) ಮತ್ತು ಮೀನಾಕ್ಷಿ ಹೂಡಾ (48ಕೆ.ಜಿ) ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದರು.

ಭಾನುವಾರ ನಡೆದ ತಮ್ಮ ವಿಭಾಗದ ಬೌಟ್‌ಗಳಲ್ಲಿ ಕಠಿಣ ಪ್ರತಿಸ್ಪರ್ಧೆ ಎದುರಿಸಿದ ಅವರು ಭಾರತ ಬಾಕ್ಸಿಂಗ್ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರುಗಳನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಿದರು. 

ADVERTISEMENT

ಪ್ಯಾರಿಸ್‌ ಒಲಿಂಪಿಕ್ ಕೂಟದ ಮಹಿಳೆಯರ 57 ಕೆ.ಜಿ. ವಿಭಾಗದ ಬೆಳ್ಳಿ ಪದಕ ವಿಜೇತ ಬಾಕ್ಸರ್‌ ಪೋಲೆಂಡ್‌ನ ಜೂಲಿಯಾ ಎಸ್‌ಝೆರೆಮೆತಾ ಅವರನ್ನು ಜೈಸ್ಮಿನ್ ಸೋಲಿಸಿದರು. ಭಾರತದ ಬಾಕ್ಸರ್ 4–1 (30-27 29-28 30-27 28-29 29-28) ರಿಂದ ಕಠಿಣ ಪೈಪೋಟಿ ಯೊಡ್ಡಿದ ತಮ್ಮ ಎದುರಾಳಿಯನ್ನು ಸೋಲಿಸಿದರು. ಇದರೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 

ಮಧ್ಯಾಹ್ನದ ನಂತರ ನಡೆದ 48 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಮೀನಾಕ್ಷಿ ಅವರು ಕಜಾಕಸ್ತಾನದ ನಾಝೀಂ ಕೈಝೈಬೆ ವಿರುದ್ಧ ಜಯಭೇರಿ ಬಾರಿಸಿದರು. ನಾಝೀಂ ಅವರು ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕ ಪಡೆದಿದ್ದರು. 

ಇದರೊಂದಿಗೆ ಜೈಸ್ಮಿನ್ ಮತ್ತು ಮೀನಾಕ್ಷಿ ಅವರು ವಿಶ್ವ ಚಾಂಪಿಯನ್‌ಷಿಪ್‌ ನಲ್ಲಿ ಚಿನ್ನ ಗೆದ್ದ ಭಾರತೀಯ ಬಾಕ್ಸರ್‌ಗಳ  ಯಾದಿಯಲ್ಲಿ ಸ್ಥಾನ ಪಡೆದರು. ಆರು ಸಲ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್  (2002, 2005, 2006, 2008, 2010 ಮತ್ತು 2018), ಎರಡು ಬಾರಿ ಚಾಂಪಿಯನ್ ನಿಖತ್ ಜರೀನ್ (2022 ಮತ್ತು 2023), ಸರಿತಾ ದೇವಿ (2006), ಜೆನ್ನಿ ಆರ್‌.ಎಲ್ (2006), ಕೆ.ಸಿ. ಲೇಖಾ (2006), ನೀತು ಗಂಗಾಸ್ (2023), ಲವ್ಲಿನಾ ಬೊರ್ಗೊಹೈನ್ (2023) ಮತ್ತು ಸವಿತಿ ಬೂರಾ (2023) ಅವರ ನಂತರ ಜೈಸ್ಮಿನ್ ಮತ್ತು ಮೀನಾಕ್ಷಿ ಅವರೂ ಈ ಪಟ್ಟಿಗೆ ಸೇರ್ಪಡೆಯಾದರು. 24 ವರ್ಷದ ಜೈಸ್ಮಿನ್ ಅವರಿಗೆ ಇದು ಮೂರನೇ ವಿಶ್ವ ಚಾಂಪಿಯನ್‌ಷಿಪ್.

ಮಹಿಳೆಯರ ವಿಭಾಗದಲ್ಲಿ ಮತ್ತೆರಡು ಪದಕಗಳೂ ಭಾರತಕ್ಕೆ ಒಲಿದವು. ನೂಪುರ್ ಶೆರಾನ್ (80 ಕೆ.ಜಿ ಮೇಲ್ಪಟ್ಟು) ಮತ್ತು ಪೂಜಾರಾಣಿ (80 ಕೆ.ಜಿ) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. 

80 ಕೆ.ಜಿ ಮೇಲ್ಪಟ್ಟವರ ವಿಭಾಗದ ಫೈನಲ್‌ನಲ್ಲಿ ನೂಪುರ್ ಅವರು 2–3ರ ಅಲ್ಪ ಅಂತರದ ಸೋಲನ್ನು ಪೋಲೆಂಡ್‌ನ ಅಗಾತಾ ಕಾಜಾಮರಸ್ಕಾ ವಿರುದ್ಧ ಅನುಭವಿಸಿದರು. ತಾಂತ್ರಿಕ ಅಂಕಗಳೊಂದಿಗೆ ಪೋಲೆಂಡ್ ಬಾಕ್ಸರ್ ಮೇಲುಗೈ ಸಾಧಿಸಿದರು. 

ಪೂಜಾ ಅವರು ಸೆಮಿಫೈನಲ್‌ನಲ್ಲಿ 1–4ರಿಂದ ಸ್ಥಳೀಯ ಫೆವರಿಟ್ ಎಮಿಲಿ ಅಷ್ಕಿತ್ ವಿರುದ್ಧ ಸೋತು ಕಂಚಿನ ಪದಕ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.