ADVERTISEMENT

ಹಾಕಿ ವಿಶ್ವಕಪ್‌: ಹೇವರ್ಡ್‌, ಕ್ರೇಗ್ ಹ್ಯಾಟ್ರಿಕ್, ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 16:43 IST
Last Updated 13 ಜನವರಿ 2023, 16:43 IST
ಆಸ್ಟ್ರೇಲಿಯಾದ ಟಾಮ್‌ ಕ್ರೇಗ್‌ (ಬಲ) ಮತ್ತು ಫ್ರಾನ್ಸ್‌ನ ಲಾಕ್‌ವುಡ್‌ ವಿಕ್ಟರ್‌ ನಡುವಿನ ಪೈಪೋಟಿ –ಪಿಟಿಐ ಚಿತ್ರ
ಆಸ್ಟ್ರೇಲಿಯಾದ ಟಾಮ್‌ ಕ್ರೇಗ್‌ (ಬಲ) ಮತ್ತು ಫ್ರಾನ್ಸ್‌ನ ಲಾಕ್‌ವುಡ್‌ ವಿಕ್ಟರ್‌ ನಡುವಿನ ಪೈಪೋಟಿ –ಪಿಟಿಐ ಚಿತ್ರ   

ಭುವನೇಶ್ವರ: ಜೆರೆಮಿ ಹೇವರ್ಡ್‌ ಮತ್ತು ಟಾಮ್‌ ಕ್ರೇಗ್‌ ಅವರ ಹ್ಯಾಟ್ರಿಕ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿತು.

ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 8–0 ಗೋಲುಗಳಿಂದ ಫ್ರಾನ್ಸ್‌ ತಂಡವನ್ನು ಮಣಿಸಿತು.

ಕ್ರೇಗ್‌ ಅವರು 8, 31 ಮತ್ತು 44ನೇ ನಿಮಿಷಗಳಲ್ಲಿ ಮೂರು ಫೀಲ್ಡ್‌ ಗೋಲುಗಳನ್ನು ಗಳಿಸಿದರೆ, ಹೇವರ್ಡ್‌ ಅವರು ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಮೂರು ಸಲ ಚೆಂಡನ್ನು ಗುರಿ ಸೇರಿಸಿದರು. ಅವರು 26, 28 ಮತ್ತು 38ನೇ ನಿ.ದಲ್ಲಿ ಗೋಲು ಹೊಡೆದರು.

ADVERTISEMENT

ಇತರ ಗೋಲುಗಳನ್ನು ಫ್ಲಿನ್‌ ಒಗಿಲ್ವಿ (26ನೇ ನಿ.) ಹಾಗೂ ಟಾಮ್‌ ವಿಕ್‌ಹ್ಯಾಂ (53ನೇ ನಿ.) ತಂದುಕೊಟ್ಟರು.

‘ಎ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಅರ್ಜೆಂಟೀನಾ 1–0 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಯಾಸದಿಂದ ಗೆದ್ದಿತು. ಪಂದ್ಯದ ಮೊದಲ ಎರಡು ಕ್ವಾರ್ಟರ್‌ಗಳು ಗೋಲುರಹಿತವಾಗಿದ್ದವು.

ಕ್ಯಾಸೆಲಾ ಮೈಕೊ ಅವರು 42ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನಾ ಗೆಲುವಿಗೆ ಕಾರಣರಾದರು. ಆಕ್ರಮಣಕಾರಿ ಆಟ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ ತಂಡ 2016ರ ಒಲಿಂಪಿಕ್ಸ್‌ ಚಾಂಪಿಯನ್ನರಿಗೆ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾಯಿತು. ಮೊದಲ ಕ್ವಾರ್ಟರ್‌ನಲ್ಲಿ ಗೋಲು ಗಳಿಸಲು ಲಭಿಸಿದ್ದ ಕೆಲವು ಉತ್ತಮ ಅವಕಾಶಗಳನ್ನು ದಕ್ಷಿಣ ಆಫ್ರಿಕಾ ಆಟಗಾರರು ಕೈಚೆಲ್ಲಿದರು.

ಅರ್ಜೆಂಟೀನಾ ತನ್ನ ಮುಂದಿನ ಪಂದ್ಯದಲ್ಲಿ ಜ.16 ರಂದು ಆಸ್ಟ್ರೇಲಿಯಾವನ್ನು ಎದುರಿಸಲಿದ್ದರೆ, ದಕ್ಷಿಣ ಆಫ್ರಿಕಾ ತಂಡ ಫ್ರಾನ್ಸ್‌ ಸವಾಲು ಎದುರಿಸಲಿದೆ.

ಇಂಗ್ಲೆಂಡ್‌ಗೆ ಗೆಲುವು: ರೂರ್ಕೆಲಾದಲ್ಲಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್‌ 5–0 ಗೋಲುಗಳಿಂದ ವೇಲ್ಸ್‌ ತಂಡವನ್ನು ಮಣಿಸಿತು.

ಪಾರ್ಕ್‌ ನಿಕೊಲಸ್‌ ಪಂದ್ಯ ಆರಂಭವಾದ ಕೆಲವೇ ಸೆಕೆಂಡುಗಳಲ್ಲಿ ಇಂಗ್ಲೆಂಡ್‌ಗೆ ಮುನ್ನಡೆ ತಂದಿತ್ತರು. ಅನ್ಸೆಲ್‌ ಲಿಯಾಮ್ (27 ಮತ್ತು 37ನೇ ನಿ.), ಫಿಲ್‌ ರೊಪೆರ್ (41) ಮತ್ತು ಬ್ಯಾಂಡುರಕ್‌ ನಿಕೊಲಸ್ (57ನೇ ನಿ.) ಅವರು ಇತರ ಗೋಲುಗಳನ್ನು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.