ಮ್ಯಾಗ್ನಸ್ ಕಾರ್ಲಸನ್, ಇಯಾನ್ ನಿಪೊಮ್‌ನಿಷಿ
(ಚಿತ್ರ ಕೃಪೆ: X/@FIDE_chess)
ನ್ಯೂಯಾರ್ಕ್: ಚೆಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪುರುಷರ ವಿಶ್ವ ಬ್ಲಿಟ್ಜ್ ಚಾಂಪಿಯನ್‌ಷಿಪ್‌ನಲ್ಲಿ ಇಬ್ಬರು ಸ್ಪರ್ಧಾಳುಗಳು ಚಾಂಪಿಯನ್ ಪಟ್ಟವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಜಿದ್ದಾಜಿದ್ದಿನಿಂದ ಕೂಡಿದ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಮತ್ತು ರಷ್ಯಾದ ಇಯಾನ್ ನಿಪೊಮ್‌ನಿಷಿ ನಡುವಣ ಪಂದ್ಯವು 2-2ರ ಅಂತರದಲ್ಲಿ ಡ್ರಾ ಕಂಡಿತ್ತು.
ಬಳಿಕ ವಿಜೇತರನ್ನು ನಿರ್ಧರಿಸಲು 'ಸಡನ್ ಡೆತ್' ಗೇಮ್ ಆಡಿಸಲಾಯಿತು. ಅಲ್ಲೂ ಮೂರು ಬಾರಿ ಡ್ರಾ ಫಲಿತಾಂಶ ಹೊರಹೊಮ್ಮಿತು.
ಪರಿಣಾಮ ಇಬ್ಬರು ಸ್ಪರ್ಧಾಳುಗಳು ಒಮ್ಮತದಿಂದ ಜಂಟಿ ಚಾಂಪಿಯನ್ ಪಟ್ಟ ಅಲಂಕರಿಸಲು ನಿರ್ಧರಿಸಿದರು. ಚೆಸ್ ಇತಿಹಾಸದಲ್ಲೇ ಇದು ಅಪರೂಪದ ಫಲಿತಾಂಶ ಎಂದೇ ಬಣ್ಣಿಸಲಾಗಿದೆ.
'ದಿನವಿಡೀ ನಾವು ಹೋರಾಡಿದೆವು. ಅನೇಕ ಪಂದ್ಯಗಳನ್ನು ಆಡಿದೆವು. ಈಗಾಗಲೇ ಮೂರು ಡ್ರಾ ಫಲಿತಾಂಶ ಕಂಡಿದ್ದೇವೆ. ಇನ್ನೂ ಆಟವನ್ನು ಮುಂದುವರಿಸಬಹುದಿತ್ತು. ಆದರೆ ಪ್ರಶಸ್ತಿ ಹಂಚಿಕೊಳ್ಳುವುದು ಸೂಕ್ತ ಫಲಿತಾಂಶವೆನಿಸಲಿದೆ. ಪಂದ್ಯ ಮುಗಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೆಯಿಲ್ಲ' ಎಂದು ಐದು ಬಾರಿಯ ವಿಶ್ವ ಚಾಂಪಿಯನ್ ಕಾರ್ಲಸನ್ ಪ್ರತಿಕ್ರಿಯಿಸಿದ್ದಾರೆ.
ಈ ಮೊದಲು ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ವಸ್ತ್ರಸಂಹಿತೆ ನಿಯಮ ಉಲ್ಲಂಘನೆಗಾಗಿ ಕಾರ್ಲಸನ್ ಅವರನ್ನು ವಿಶ್ವ ರ್‍ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನಿಂದ ಅನರ್ಹಗೊಳಿಸಲಾಗಿತ್ತು. ಬಳಿಕ ನಡೆದ ಮಾತುಕತೆಯಲ್ಲಿ ಬ್ಲಿಟ್ಜ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.