ADVERTISEMENT

ಬ್ಯಾಡ್ಮಿಂಟನ್‌: ಹೈದರಾಬಾದ್‌ ಓಪನ್‌ ರದ್ದು

ಆಗಸ್ಟ್‌ 11ರಿಂದ ನಡೆಯಬೇಕಾಗಿದ್ದ ಟೂರ್ನಿ

ಪಿಟಿಐ
Published 4 ಜೂನ್ 2020, 20:57 IST
Last Updated 4 ಜೂನ್ 2020, 20:57 IST
   

ನವದೆಹಲಿ: ಇದೇ ಆಗಸ್ಟ್‌ನಲ್ಲಿ ನಡೆಯಬೇಕಾಗಿದ್ದ ಹೈದರಾಬಾದ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯನ್ನು, ಕೋವಿಡ್‌–19 ಪಿಡುಗು ಮುಂದುವರಿಯುತ್ತಿರುವ ಕಾರಣ ಗುರುವಾರ ರದ್ದುಗೊಳಿಸಲಾಗಿದೆ.

ಕೊರೊನಾ ಹಾವಳಿಯಿಂದ ಸ್ಥಗಿತಗೊಂಡಿದ್ದ ಆಟಕ್ಕೆ ಮರುಚಾಲನೆ ನೀಡಲು ಕಳೆದ ತಿಂಗಳ 22ರಂದು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌), ಪರಿಷ್ಕೃತ ಟೂರ್ನಿ ಕ್ಯಾಲೆಂಡರ್‌ (ವೇಳಾಪಟ್ಟಿ) ಬಿಡುಗಡೆ ಮಾಡಿತ್ತು. ಇದರ ಪ್ರಕಾರ ಹೈದರಾಬಾದ್‌ ಓಪನ್‌ ಟೂರ್ನಿ ಆಗಸ್ಟ್‌ 11 ರಿಂದ 16ರವರೆಗೆ ನಡೆಯಬೇಕಾಗಿತ್ತು.

‘ಬಿಡಬ್ಲ್ಯುಎಫ್‌ ಮತ್ತು ಭಾರತ ಬ್ಯಾಡ್ಮಿಂಟ್‌ ಸಂಸ್ಥೆ, ಬಿಡಬ್ಲ್ಯುಎಫ್‌ ಟೂರ್‌ ಸೂಪರ್‌ 100 ಶ್ರೇಣಿಯ ಹೈದರಾಬಾದ್‌ ಓಪನ್‌ ರದ್ದುಮಾಡಲು ಒಪ್ಪಿಕೊಂಡಿವೆ’ ಎಂದು ಬಿಡಬ್ಲ್ಯುಎಫ್‌ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಕೆಲವು ದೇಶಗಳಲ್ಲಿ ಪರಿಸ್ಥಿತಿ ಬದಲಾಗುತ್ತಿರುತ್ತದೆ. ಹೀಗಾಗಿ ಟೂರ್ನಿಗಳ ಸ್ಥಿತಿಗತಿಯನ್ನು ಅಗತ್ಯವಿರುವಾಗಲೆಲ್ಲಾ ನೀಡಲಾಗುತ್ತದೆ’ ಎಂದು ಬಿಡಬ್ಲ್ಯುಎಫ್‌ ಮಹಾ ಕಾರ್ಯದರ್ಶಿ ಥಾಮಸ್‌ ಲಂಡ್‌ ತಿಳಿಸಿದರು.

‘ಆರೋಗ್ಯ, ಸುರಕ್ಷತೆ ಮತ್ತು ಸಂಚಾರ ನಿರ್ಬಂಧ ದೇಶದಿಂದ ದೇಶಕ್ಕೆ ಭಿನ್ನವಾಗಿವೆ. ಕೆಲವು ದೇಶಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಹೈದರಾಬಾದ್‌ ಈಗಲೂ ಲಾಕ್‌ಡೌನ್‌ನಲ್ಲಿ ಇರುವುದರಿಂದ ಆಗಸ್ಟ್‌ನಲ್ಲಿ ಟೂರ್ನಿ ನಡೆಸುವ ಕುರಿತು ಮಾತುಕೊಡುವುದು ನಮಗೆ ತೀರಾ ಕಷ್ಟವಾಗಿತ್ತು’ ಎಂದು ಮುಖ್ಯ ರಾಷ್ಟ್ರೀಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಒ‍ಪ್ಪಿಕೊಂಡರು.

‘ಹೈದರಾಬಾದ್‌ನಲ್ಲಿ ಲಾಕ್‌ಡೌನ್‌ ತೆರವುಗೊಂಡಿಲ್ಲ. ಕ್ರೀಡಾ ಸೌಕರ್ಯಗಳ ಬಳಕೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದರೂ, ಇದನ್ನು ಯಾವಾಗ ಆರಂಭ ಮಾಡಬೇಕು ಎಂದು ತೆಲಂಗಾಣ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಈ ಸಂಬಂಧ ಮಾಹಿತಿಗೆ ಕಾಯುತ್ತಿದ್ದೇವೆ’ ಎಂದು ಗೋಪಿಚಂದ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇನ್ನೆರಡು ಟೂರ್ನಿ ರದ್ದು: ಬಿಡಬ್ಲ್ಯುಎಫ್‌ ಈ ಟೂರ್ನಿಯ ಜೊತೆಗೆ ಆಸ್ಟ್ರೇಲಿಯಾ ಓಪನ್‌ ಮತ್ತು ಕೊರಿಯಾ ಮಾಸ್ಟರ್ಸ್‌ ಟೂರ್ನಿಗಳನ್ನೂ ರದ್ದುಗೊಳಿಸಿದೆ. ಆಸ್ಟ್ರೇಲಿಯಾ ಓಪನ್‌ ಜೂನ್‌ 2 ರಿಂದ 7ರವರೆಗೆ ನಡೆಯಬೇಕಾಗಿತ್ತು.

ಕೊರಿಯಾ ಮಾಸ್ಟರ್ಸ್‌ ಟೂರ್ನಿ (ವಿಶ್ವಟೂರ್‌ ಸೂಪರ್‌ 300 ಸರಣಿ) ನವೆಂಬರ್‌ 24 ರಿಂದ 29ರವರೆಗೆ ನಿಗದಿಯಾಗಿತ್ತು. ಬ್ಯಾಡ್ಮಿಂಟನ್‌ ಕೊರಿಯಾ, ‘ಕೊರಿಯಾ ಓಪನ್‌’ ಟೂರ್ನಿಯನ್ನು ಸೆ. 8 ರಿಂದ 13ರವರೆಗೆ ನಡೆಸಲಿದೆ ಎಂದು ಬಿಡಬ್ಲ್ಯುಎಫ್‌ ತಿಳಿಸಿದೆ.

ಮೂರು ಟೂರ್ನಿಗಳು ಅಮಾನತಿನಲ್ಲಿದ್ದು, ಅವುಗಳು ಸ್ಥಿತಿಗತಿ ಬದಲಾಗಿಲ್ಲ. ಜರ್ಮನ್‌ ಓಪನ್‌ (ಮಾರ್ಚ್‌ 3 ರಿಂದ 8), ಸ್ವಿಸ್‌ ಓಪನ್‌ (ಮಾರ್ಚ್‌ 17 ರಿಂದ 22) ಮತ್ತು 2020 ಯುರೋಪಿಯನ್‌ ಚಾಂಪಿಯನ್‌ಷಿಪ್ಸ್‌ (ಏಪ್ರಿಲ್ 21 ರಿಂದ 26)– ಈ ಮೂರು ಟೂರ್ನಿಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.