ಶುಭಮನ್ ಗಿಲ್
(ಪಿಟಿಐ ಚಿತ್ರ)
ದುಬೈ: ಜುಲೈ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾರತ ತಂಡದ ನಾಯಕ ಶುಭಮನ್ ಗಿಲ್ ಸೇರಿದಂತೆ ಮೂವರು ಆಟಗಾರರು ನಾಮನಿರ್ದೇಶನಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ವಿಯಾನ್ ಮಲ್ಡರ್ ಮತ್ತು ಇಂಗ್ಲೆಂಡ್ ತಂಡನ ನಾಯಕ ಬೆನ್ ಸ್ಟೋಕ್ಸ್ ಇತರ ಇಬ್ಬರು.
ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳ ಸರಣಿಗೆ ಗಿಲ್ ಅವರು ಭಾರತ ಯುವ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ವೈಯಕ್ತಿಕವಾಗಿಯೂ ಮಿಂಚಿದ 25 ವರ್ಷ ವಯಸ್ಸಿನ ಗಿಲ್ ಒಂದು ದ್ವಿಶತಕ ಒಳಗೊಂಡಂತೆ 75.40ರ ಸರಾಸರಿಯಲ್ಲಿ 754 ರನ್ ಪೇರಿಸಿ ಗಮನಸೆಳೆದಿದ್ದರು. ಐದು ಟೆಸ್ಟ್‌ಗಳ ಸರಣಿಗೆ ನಾಯಕನಾಗಿ, ಗಾವಸ್ಕರ್ ಅವರ ದಾಖಲೆಯನ್ನು (732 ರನ್) ಮುರಿದಿದ್ದರು. ಡಾನ್ ಬ್ರಾಡ್ಮನ್ (810 ರನ್) ಬಿಟ್ಟರೆ ನಾಯಕನಾಗಿ ಅತಿ ಹೆಚ್ಚು ರನ್ ಕಲೆಹಾಕಿದವರಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್‌ಗಳಲ್ಲಿ ಗಿಲ್ 94.50 ಸರಾಸರಿಯಲ್ಲಿ 567 ರನ್ ಗಳಿಸಿದ್ದು ಅಮೋಘ ಸಾಧನೆಯಾಗಿದೆ ಎಂದು ಐಸಿಸಿಯು ತನ್ನ ವೆಬ್‌ಸೈಟ್‌ನಲ್ಲಿ ಬರೆದಿದೆ.
ಎಜ್‌ಬಾಸ್ಟನ್‌ನಲ್ಲಿ ಭಾರತದ ಗೆಲುವಿನಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಅವರು 269 ಮತ್ತು 161 ರನ ಗಳಿಸಿದ್ದು ಪಂದ್ಯದಲ್ಲಿ ಕಲೆಹಾಕಿದ ಒಟ್ಟು 430 ರನ್, ಇಂಗ್ಲೆಂಡ್‌ನ ಗ್ರಹಾಂ ಗೂಚ್ (456) ನಂತರ ಎರಡನೇ ಅತ್ಯಧಿಕ ಮೊತ್ತ ಎನಿಸಿದೆ ಎಂದೂ ಅದು ತಿಳಿಸಿದೆ. ಗಿಲ್, ಸಾರ್ವಕಾಲಿಕ ಶ್ರೇಷ್ಠ ವಿರಾಟ್ ಕೊಹ್ಲಿ ಅವರ ಸ್ಥಾನ ತುಂಬುತ್ತಿದ್ದಾರೆ ಎಂದೂ ಬರೆದಿದೆ.
ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಬಾರಿ ನಾಯಕನಾಗಿ ಮಲ್ಡರ್, ಜಿಂಬಾಬ್ವೆ ವಿರುದ್ಧ ಬುಲಾವಯೊದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಜೇಯ 367 ರನ್ ಬಾರಿಸಿದ್ದರು. ಅವರು ಬ್ರಯಾನ್ ಲಾರಾ ಅವರ ದಾಖಲೆ (ಔಟಾಗದೇ 400) ಮುರಿಯುವ ಅವಕಾಶ ಹೊಂದಿದ್ದರು. ಆದರೆ ಇನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡಿದ್ದರು. ಮಲ್ಡರ್, ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ಮೊತ್ತ ಪೇರಿಸಿದ ಹಿರಿಮೆಗೂ ಪಾತ್ರರಾದರು.
ಅವರು ಎರಡು ಪಂದ್ಯಗಳಲ್ಲಿ 265.50 ಸರಾಸರಿಯಲ್ಲಿ 531 ರನ್ ಗಳಿಸಿದ್ದು ಅತ್ಯಮೋಘ ಸಾಧನೆ ಎಂದು ಐಸಿಸಿ ಬಣ್ಣಿಸಿದೆ. ಬೌಲಿಂಗ್‌ನಲ್ಲೂ ಕರಾಮತ್ತು ತೋರಿದ ಅವರು 15.28 ಸರಾಸರಿಯಲ್ಲಿ ಏಳು ವಿಕೆಟ್‌ಗಳನ್ನು ಗಳಿಸಿದ್ದರು.
ಭಾರತ ವಿರುದ್ಧ ಸರಣಿಯಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಸ್ಟೋಕ್ಸ್ ಅವರನ್ನೂ ಐಸಿಸಿ ಶ್ಲಾಘಿಸಿದೆ. ನಾಯಕನಾಗಿ ಅವರು 50.20 ಸರಾರಿಯಲ್ಲಿ 251 ರನ್ ಗಳಿಸಿದ್ದರು. 26.33 ಸರಾಸರಿಯಲ್ಲಿ 12 ವಿಕೆಟ್ ಪಡೆದಿದ್ದರು. ಅತ್ಯಂತ ಪೈಪೋಟಿಯ ಪಂದ್ಯದ ನಿರ್ಣಾಯಕ ಸಂದರ್ಭದಲ್ಲಿ ತಂಡದ ನೆರವಿಗೆ ಬಂದಿದ್ದರು.
ನಿಕಟ ಪೈಪೋಟಿಯ ಸರಣಿಯಲ್ಲಿ ಅವರ ನಾಯಕತ್ವದ ಕೌಶಲ ಇಂಗ್ಲೆಂಡ್ ತಂಡದ ಪ್ರದರ್ಶನದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಎದುರಾಳಿ ತಂಡದ ಜೊತೆಯಾಟಗಳನ್ನು ಮುರಿದು ಇಂಗ್ಲೆಂಡ್ ಮೇಲುಗೈ ಪಡೆಯಲು ನೆರವಾಗಿದ್ದಾರೆ ಎಂದು ಐಸಿಸಿ ಬಣ್ಣಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.