ADVERTISEMENT

ಕ್ರೀಡೆಯೊಂದಿಗಿನ ಸಂಬಂಧ ಕಳಚಿರುವೆ: ಕುಸ್ತಿಗೆ ನಿವೃತ್ತಿ ಘೋಷಿಸಿದ ಬ್ರಿಜ್ ಭೂಷಣ್

ಪಿಟಿಐ
Published 24 ಡಿಸೆಂಬರ್ 2023, 12:30 IST
Last Updated 24 ಡಿಸೆಂಬರ್ 2023, 12:30 IST
<div class="paragraphs"><p>ಬ್ರಿಜ್‌ ಭೂಷಣ್ ಸಿಂಗ್ –ಪಿಟಿಐ ಚಿತ್ರ</p></div>

ಬ್ರಿಜ್‌ ಭೂಷಣ್ ಸಿಂಗ್ –ಪಿಟಿಐ ಚಿತ್ರ

   

ನವದೆಹಲಿ: ‘ಕ್ರೀಡೆಯಿಂದ ನಿವೃತ್ತಿ ಪಡೆಯುತ್ತಿದ್ದೇನೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಸೇರಿದಂತೆ ಹಲವು ಜವಾಬ್ದಾರಿ ಹೊಂದಿರುವುದರಿಂದ ಹೊಸ ಆಡಳಿತ ಮಂಡಳಿ ಈಗ ಅಧಿಕಾರ ವಹಿಸಿಕೊಳ್ಳಲಿದೆ’ ಎಂದು ಭಾರತ ಕುಸ್ತಿ ಫೇಡರೇಷನ್‌ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ ತಿಳಿಸಿದ್ದಾರೆ. 

ಮುಂದಿನ ಆದೇಶದವರೆಗೆ ಕ್ರೀಡಾ ಸಚಿವಾಲಯ ಡಬ್ಲ್ಯುಎಫ್ಐ ಅನ್ನು ಅಮಾನತುಗೊಳಿಸಿದ ಬಳಿಕ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗಿನ ಸಭೆ ನಂತರ ಬ್ರಿಜ್ ಭೂಷಣ್ ಈ ಹೇಳಿಕೆ ನೀಡಿದ್ದಾರೆ.

ADVERTISEMENT

15 ಮತ್ತು 19 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ ಆಯೋಜನೆಗೆ ಸರಿಯಾದ ಕಾರ್ಯ ವಿಧಾನ ಅನುಸರಿಸದೆ ಮತ್ತು ಸಿದ್ಧತೆಗಾಗಿ ಕುಸ್ತಿಪಟುಗಳಿಗೆ ಸಾಕಷ್ಟು ಸೂಚನೆ ನೀಡದೆ ಆತುರದಲ್ಲಿ ದಿನಾಂಕ ಘೋಷಣೆ ಮಾಡಿದೆ ಎಂದು ಕ್ರೀಡಾ ಸಚಿವಾಲಯ ಹೊರಡಿಸಿರುವ ಅಮಾನತು ಆದೇಶದಲ್ಲಿ ಉಲ್ಲೇಖಿಸಿದೆ. 

‘ನಾನು 12 ವರ್ಷಗಳ ಕಾಲ ಕುಸ್ತಿಗೆ ಸೇವೆ ಸಲ್ಲಿಸಿದ್ದೇನೆ. ಒಳ್ಳೆಯದು ಅಥವಾ ಕೆಟ್ಟದ್ದನ್ನು ಸಮಯ ಮಾತ್ರ ಹೇಳುತ್ತದೆ. ನಾನು ಕುಸ್ತಿಯಿಂದ ನಿವೃತ್ತಿ ಪಡೆದಿದ್ದೇನೆ. ಕ್ರೀಡೆಯೊಂದಿಗಿನ ನನ್ನ ಸಂಬಂಧ ಮುರಿಯುತ್ತಿದ್ದೇನೆ. ಕುಸ್ತಿಗೆ ಸಂಬಂಧಿಸಿದಂತೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಹೊಸ ಮಂಡಳಿ ಮಾಡಲಿದೆ. ಸರ್ಕಾರ ದೊಂದಿಗೆ ಸಂಪರ್ಕ ಸಾಧಿಸಬೇಕೇ ಅಥವಾ ಕಾನೂನು ಪ್ರಕ್ರಿಯೆ ನಿರ್ವಹಿಸಬೇಕೇ, ಆ ನಿರ್ಧಾರಗಳನ್ನು ಚುನಾಯಿತ ಸದಸ್ಯರು ತೆಗೆದುಕೊಳ್ಳುತ್ತಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ನಾನು ಮುಂದೆ ಸಾಗಬೇಕಾಗಿದೆ’ ಎಂದು ಹೇಳಿದರು.  

ಯುವ ಆಟಗಾರರು ತಮ್ಮ ವೃತ್ತಿಜೀವನದ ಒಂದು ಅಮೂಲ್ಯ ವರ್ಷ  ಕಳೆದುಕೊಳ್ಳುವುದನ್ನು ಬಯಸದ ಕಾರಣ ರಾಷ್ಟ್ರೀಯ ಚಾಂಪಿಯನ್‌ಷಿಪ್ ನಡೆಸುವ ನಿರ್ಧಾರ ಅವಸರದಲ್ಲಿ ತೆಗೆದುಕೊಳ್ಳಲಾ
ಗಿದೆ ಎಂದು ಬ್ರಿಜ್ ಭೂಷಣ್ ಸ್ಪಷ್ಟಪಡಿಸಿದರು.

ಕಡಿಮೆ ಸಮಯದಲ್ಲಿ ಕ್ರೀಡಾಕೂಟಕ್ಕೆ ಎಲ್ಲಾ ರಾಜ್ಯ ಸಂಸ್ಥೆಗಳು ಆತಿಥ್ಯ ವಹಿಸಲು ನಿರಾಕರಿಸಿದ ಕಾರಣ ನ್ಯಾಷನಲ್ಸ್ ಅನ್ನು ನಂದಿನಿ ನಗರದಲ್ಲಿ ಆಯೋಜಿಸಲು ನಿರ್ಧರಿಸಲಾಯಿತು. ಇದಕ್ಕೆ ಎಲ್ಲಾ 25 ರಾಜ್ಯ ಸಂಸ್ಥೆಗಳು ಲಿಖಿತವಾಗಿ ಒಪ್ಪಿಗೆ ನೀಡಿವೆ ಎಂದರು. 

‘ಮಕ್ಕಳು ಒಂದು ವರ್ಷ ಕಳೆದುಕೊಳ್ಳದಂತೆ ದೆಹಲಿ ಅಥವಾ ಅವರು ಬಯಸುವ ಯಾವುದೇ ಸ್ಥಳದಲ್ಲಿ ಪಂದ್ಯಾವಳಿಯನ್ನು ತಮ್ಮ  ಮೇಲ್ವಿಚಾರಣೆಯಲ್ಲಿ ಆಯೋಜಿಸುವಂತೆ ಸರ್ಕಾರ ಮತ್ತು ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡುತ್ತೇನೆ’ ಎಂದು ಅವರು ಹೇಳಿದರು.

ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಭೇಟಿ ವೇಳೆ ಡಬ್ಯ್ಲುಎಫ್‌ಐ ನೂತನ ಆಡಳಿತ ಮಂಡಳಿ ಅಮಾನತುಗೊಳಿಸಿರುವ ಕುರಿತು ಚರ್ಚೆ ನಡೆದಿಲ್ಲ ಎಂದರು.

‘ಅವರು (ನಡ್ಡಾ) ನನ್ನ ನಾಯಕ. ಅವರನ್ನು ಭೇಟಿಯಾಗುತ್ತಲೇ ಇರುತ್ತೇನೆ. ಆದರೆ, ಇದಕ್ಕೂ ಕುಸ್ತಿ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಬ್ರಿಜ್ ಭೂಷಣ್ ಹೇಳಿದರು.

ಡಬ್ಲ್ಯುಎಫ್ಐನ ಅಧ್ಯಕ್ಷ ಸಂಜಯ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದ  ಬ್ರಿಜ್‌ಭೂಷಣ್, ‘ಅವರು ನನ್ನ ಸಂಬಂಧಿಯಲ್ಲ’ ಎಂದರು.  

ನಿಯಮ ಉಲ್ಲಂಘಿಸಿಲ್ಲ: ಸಂಜಯ್‌ ಸಿಂಗ್

‘ಡಬ್ಲ್ಯುಎಫ್‌ಐನ ಹೊಸ ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳುವಾಗ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸರ್ಕಾರಕ್ಕೆ ವಿವರಿಸುವ ಮೂಲಕ ಅಮಾನತು ರದ್ದುಗೊಳಿಸುವಂತೆ ಕೋರಲಾಗುವುದು. ಒಂದು ವೇಳೆ ಸಮಸ್ಯೆ ಪರಿಹರಿಸಿದ್ದರೆ ಕಾನೂನು ಕ್ರಮದ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಭಾರತ ಕುಸ್ತಿ ಫಡರೇಷನ್‌ನ ಅಮಾನತುಗೊಂಡ ಸಮಿತಿ ಅಧ್ಯಕ್ಷ ಸಂಜಯ್ ಸಿಂಗ್ ತಿಳಿಸಿದ್ದಾರೆ.  

‘ಕ್ರೀಡಾ ಸಚಿವರ ಭೇಟಿಗೆ ಸಮಯ ಕೋರುತ್ತಿದ್ದೇವೆ. ಅಮಾನತು ತೆಗೆದುಹಾಕುವಂತೆ ಮಾಡುತ್ತಿದ್ದೇವೆ. ಮಾತುಕತೆ ಮೂಲಕ ಸಮಸ್ಯೆ  ಪರಿಹರಿಸದಿದ್ದರೆ, ಕಾನೂನು ಕ್ರಮದ ಬಗ್ಗೆ ಯೋಜಿಸಬಹುದು’ ಎಂದರು. 

‘ನಿರ್ಧಾರ ತೆಗೆದುಕೊಳ್ಳುವಾಗ ನಿಯಮಗಳನ್ನು ಪಾಲಿಸಿದ್ದೇವೆ ಎಂಬುದನ್ನು ವಿವರಿಸುತ್ತೇವೆ. ಅದಕ್ಕೆ ಪುರಾವೆಗಳನ್ನು ಒದಗಿಸುತ್ತೇವೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರೂ ಅದನ್ನು ಒಮ್ಮತದಿಂದ ತೆಗೆದುಕೊಳ್ಳಲಾಗುತ್ತಿತ್ತು. ಇದು ನನ್ನ ವೈಯಕ್ತಿಕ ನಿರ್ಧಾರವಲ್ಲ. 24 ರಾಜ್ಯ ಸಂಸ್ಥೆಗಳು ಪ್ರಮಾಣಪತ್ರ ನೀಡಿವೆ ಮತ್ತು ನಮಗೆ ಇ-ಮೇಲ್‌ಗಳು ಬಂದಿವೆ. ಎಲ್ಲವನ್ನೂ ಲಿಖಿತವಾಗಿ ಹೊಂದಿದ್ದೇವೆ’ ಎಂದು ಅವರು ಹೇಳಿದರು. 

ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆಂದೋಲನದ ಪ್ರಮುಖರಲ್ಲಿ ಒಬ್ಬರಾದ ಸಾಕ್ಷಿ ಮಲಿಕ್ ಡಬ್ಲ್ಯುಎಫ್ಐ ಅಮಾನತು ಅನ್ನು ಸ್ವಾಗತಿಸಿದರು.

‘ಇದು ಒಳ್ಳೆಯದನ್ನು ಮಾಡುವತ್ತ ಮೊದಲ ಹೆಜ್ಜೆಯಾಗಿದೆ. ಯಾವ ಕಾರಣಕ್ಕಾಗಿ ಹೋರಾಡುತ್ತಿದ್ದೇವೆ ಎಂಬುದನ್ನು ಸರ್ಕಾರ ಹೆಚ್ಚು ಅರ್ಥಮಾಡಿಕೊಳ್ಳುತ್ತದೆ ಎಂದು ಭಾವಿಸುತ್ತೇನೆ. ಫೆಡರೇಷನ್‌ಗೆ ಮಹಿಳೆ ಅಧ್ಯಕ್ಷರಾಗಿದ್ದರೆ ಮಹಿಳಾ ಕುಸ್ತಿಪಟುಗಳ ಸುರಕ್ಷತೆಗೆ ಒಳ್ಳೆಯದು. ಇದು ದೇಶದ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹೋರಾಟವಾಗಿತ್ತು’ ಎಂದು ಸಾಕ್ಷಿ ಹೇಳಿದರು.

ನ್ಯಾಯ ಸಿಗುವವರೆಗೂ ಪ್ರಶಸ್ತಿ ಹಿಂಪಡೆಯಲ್ಲ: ಬಜರಂಗ್‌

ಬ್ರಿಜ್ ಭೂಷಣ್ ನಿಕಟವರ್ತಿ ಎನ್ನಲಾದ ಸಂಜಯ್ ಸಿಂಗ್ ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆ ಆಗಿರುವುದನ್ನು ವಿರೋಧಿಸಿ ಶುಕ್ರವಾರ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದ ಕುಸ್ತಿಪಟು ಬಜರಂಗ್ ಪೂನಿಯಾ, ತಮ್ಮ ಪ್ರಶಸ್ತಿಯನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದರು.

‘ನಾನು ಪ್ರಶಸ್ತಿ ಹಿಂದಿರುಗಿಸಿದ್ದೇನೆ. ಅದನ್ನು ಹಿಂಪಡೆಯಲು ಹೋಗುವುದಿಲ್ಲ. ಸಹೋದರಿಯರು ಮತ್ತು ಹೆಣ್ಣುಮಕ್ಕಳ ಗೌರವವು ಯಾವುದೇ ಪ್ರಶಸ್ತಿಗಿಂತ ದೊಡ್ಡದು. ಏನಾಗುತ್ತಿದೆ ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ನ್ಯಾಯ ದೊರೆತ ಬಳಿಕ ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತೇನೆ. ಈ ವಿಷಯವು ನ್ಯಾಯಾಲಯದಲ್ಲಿದೆ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ’ ಎಂದು ಬಜರಂಗ್‌ ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಶುಕ್ರವಾರ ನವದೆಹಲಿಯ ಕರ್ತವ್ಯ ಪಥಕ್ಕೆ ತೆರಳಿದ  ಬಜರಂಗ್ ಪೂನಿಯಾ ಅವರನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದರು. ಆದರೆ, ಬಜರಂಗ್ ಅವರು ಪ್ರಧಾನಿಗೆ ಬರೆದ ಪತ್ರದ ಜತೆ ಪ್ರಶಸ್ತಿ ಪದಕವನ್ನು ಫುಟ್‌ಪಾತ್‌ನಲ್ಲಿ ಇಟ್ಟು ತೆರಳಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.